ನವದೆಹಲಿ: ವಿಯೆಟ್ನಾಂನಲ್ಲಿ 21 ವರ್ಷದ ವಿದ್ಯಾರ್ಥಿಯೊಬ್ಬ ಹಕ್ಕಿ ಜ್ವರದಿಂದ ಮೃತಪಟ್ಟಿದ್ದಾನೆ. ಇದು ಹಕ್ಕಿಜ್ವರದಿಂದ ದೇಶದಲ್ಲಿ ಸಂಭವಿಸಿದ ಮೊದಲ ಸಾವು ಎಂದು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ.
ನ್ಹಾ ಟ್ರಾಂಗ್ ವಿಶ್ವವಿದ್ಯಾಲಯದ ಪುರುಷ ವಿದ್ಯಾರ್ಥಿಯೊಬ್ಬ ಇನ್ಫ್ಲುಯೆಂಜಾ ವೈರಸ್ ಸೋಂಕಿನ ಎಚ್ 5 ಎನ್ 1 ಉಪ ತಳಿಯ ಸೋಂಕಿನಿಂದ ಸಾವನ್ನಪ್ಪಿದ್ದಾನೆ ಎಂದು ವಿಯೆಟ್ನಾಂನ ಪ್ರಿವೆಂಟಿವ್ ಮೆಡಿಸಿನ್ ಇಲಾಖೆ (ಆರೋಗ್ಯ ಸಚಿವಾಲಯ) ದೃಢಪಡಿಸಿದೆ ಎಂದು ಏಷ್ಯಾನ್ಯೂಸ್ ಡಾಟ್ ನೆಟ್ವರ್ಕ್ ವರದಿ ಮಾಡಿದೆ.
ಹಕ್ಕಿಜ್ವರದಿಂದ ಓರ್ವ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ಸೋಂಕು ಮಾನವರಿಗೆ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆರೋಗ್ಯ ಸಚಿವಾಲಯ ಒತ್ತಿಹೇಳಿದೆ.
ಸಚಿವಾಲಯದ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆಯಲ್ಲಿ ಮೃತ ವ್ಯಕ್ತಿಯ ಮನೆಯ ಬಳಿ ಯಾವುದೇ ಅನಾರೋಗ್ಯಪೀಡಿತ ಅಥವಾ ಸತ್ತ ಕೋಳಿಗಳು ಕಂಡುಬಂದಿಲ್ಲ. ಆದರೆ ಚಾಂದ್ರಮಾನ ಹೊಸ ವರ್ಷದ ರಜಾದಿನದ ಮೊದಲು ಮತ್ತು ನಂತರ ಕೆಲ ಕಾಡು ಪಕ್ಷಿಗಳು ಮೃತನ ಮನೆಯ ಬಳಿ ಸತ್ತು ಬಿದ್ದಿರುವುದು ಕಂಡು ಬಂದಿತ್ತು ಎಂದು ಸಾಂಕ್ರಾಮಿಕ ರೋಗ ಸುದ್ದಿ ಬ್ಲಾಗ್ ಏವಿಯನ್ ಫ್ಲೂ ಡೈರಿ ವರದಿ ಮಾಡಿದೆ. ಈ ವ್ಯಕ್ತಿ ಮಾರ್ಚ್ 23ರಂದು ಸೋಂಕಿನಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಕ್ ನಿನ್ಹ್, ನಿನ್ಹ್ ಬಿನ್ಹ್, ಖಾನ್ಹ್ ಹೋವಾ, ಬಾ ರಿಯಾ-ವುಂಗ್ ಟೌ, ಲಾಂಗ್ ಆನ್ ಮತ್ತು ಟಿಯೆನ್ ಜಿಯಾಂಗ್ ಪ್ರಾಂತ್ಯಗಳು ಮತ್ತು ನಗರಗಳಲ್ಲಿ ಜನವರಿಯಿಂದ ಹಕ್ಕಿ ಜ್ವರದ ಪ್ರಕರಣಗಳು ಕಾಣಿಸಿಕೊಂಡಿವೆ.
"ಋತುಮಾನಗಳು ಬದಲಾಗುತ್ತಿರುವುದರಿಂದ ಹವಾಮಾನದಲ್ಲಿ ಕೂಡ ಅನಿರೀಕ್ಷಿತ ಬದಲಾವಣೆಗಳು ಕಂಡು ಬಂದಿವೆ. ಇದು ವೈರಸ್ ಬೆಳವಣಿಗೆಗೆ ಪೂರಕ ವಾತಾವರಣವಾಗಿದೆ" ಎಂದು ಆರೋಗ್ಯ ಸಚಿವಾಲಯ ಹೇಳಿದೆ ಎಂದು ಏಷ್ಯಾನ್ಯೂಸ್ ಡಾಟ್ ನೆಟ್ವರ್ಕ್ ವರದಿ ಮಾಡಿದೆ. ಹೊಸ ಪ್ರಕರಣಗಳನ್ನು ಪತ್ತೆಹಚ್ಚಲು ಕಣ್ಗಾವಲು ಹೆಚ್ಚಿಸುವಂತೆ ಸಚಿವಾಲಯವು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದೆ.
'ಹಕ್ಕಿ ಜ್ವರ' ಎಂದೂ ಕರೆಯಲ್ಪಡುವ ಏವಿಯನ್ ಇನ್ ಫ್ಲುಯೆಂಜಾ ಪ್ರಾಥಮಿಕವಾಗಿ ಪಕ್ಷಿಗಳಲ್ಲಿ ಕಾಣಿಸಿಕೊಳ್ಳುವ ರೋಗವಾಗಿದೆ. ಇದು ಆರ್ಥೊಮೈಕ್ಸೊವಿರಿಡೇ ಪ್ರಭೇದದ ವೈರಸ್ನಿಂದ ಹರಡುತ್ತದೆ. ವಲಸೆ ಕಾಡು ಪಕ್ಷಿಗಳ ಮೂಲಕ ವೈರಸ್ ಒಂದು ಪ್ರದೇಶವನ್ನು ಪ್ರವೇಶಿಸುವ ಸಾಮಾನ್ಯ ಮಾರ್ಗವಾಗಿದೆ. ನಂತರ ವೈರಸ್ ಪಕ್ಷಿಗಳಿಂದ ಮನುಷ್ಯರಿಗೆ ಹರಡುತ್ತದೆ.
ಇದನ್ನೂ ಓದಿ: ಓಪನ್ ಎಐ ವಿಫಲವಾಗಲಿದೆ ಅಂದುಕೊಂಡಿದ್ದರು ಮಸ್ಕ್: ಸ್ಯಾಮ್ ಆಲ್ಟ್ ಮ್ಯಾನ್ - OpenAI