ನವದೆಹಲಿ: ಸುಮಾರು 2,500 ವರ್ಷಗಳ ಹಿಂದೆ ಸಂಭವಿಸಿದ್ದ 7 ಅಥವಾ 8 ರಿಕ್ಟರ್ ತೀವ್ರತೆಯ ದೊಡ್ಡ ಭೂಕಂಪವೊಂದರ ಕಾರಣದಿಂದ ಗಂಗಾ ನದಿಯ ಹರಿವಿನ ಮಾರ್ಗ ಬದಲಾಗಿತ್ತು ಎಂದು ಯುಎಸ್ ಸಂಶೋಧಕರ ತಂಡ ಸೋಮವಾರ ಹೇಳಿದೆ. ಅಲ್ಲದೆ ಮತ್ತೊಮ್ಮೆ ಇದೇ ತೀವ್ರತೆಯ ಭೂಕಂಪ ಸಂಭವಿಸಿದಲ್ಲಿ ಬಾಂಗ್ಲಾದೇಶದ ಅತ್ಯಂತ ಜನನಿಬಿಡ ಪ್ರದೇಶಕ್ಕೆ ದೊಡ್ಡ ಮಟ್ಟದ ಅಪಾಯ ಎದುರಾಗಬಹುದು ಎಂದು ಅದು ತಿಳಿಸಿದೆ.
ನೇಚರ್ ಕಮ್ಯುನಿಕೇಷನ್ಸ್ ಜರ್ನಲ್ನಲ್ಲಿ ಪ್ರಕಟವಾದ ಯುಎಸ್ನ ಕೊಲಂಬಿಯಾ ಕ್ಲೈಮೇಟ್ ಸ್ಕೂಲ್ನ ಭೂಭೌತಶಾಸ್ತ್ರಜ್ಞರ ನೇತೃತ್ವದಲ್ಲಿ ನಡೆಸಲಾದ ಅಧ್ಯಯನವು, ಈ ಹಿಂದೆ ಸಂಭವಿಸಿದ ದೊಡ್ಡ ಭೂಕಂಪವೊಂದು ಎಲ್ಲೂ ದಾಖಲಿತವಾಗಿಲ್ಲ ಹಾಗೂ ಇದರ ಕಾರಣದಿಂದಲೇ ಗಂಗಾನದಿ ಪಾತ್ರ ಬದಲಾಯಿಸಿತ್ತು. ಈಗಿನ ಜನನಿಬಿಡ ಬಾಂಗ್ಲಾದೇಶವಾಗಿರುವ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿತ್ತು ಎಂದು ವರದಿ ಹೇಳಿದೆ.
ಭೂಕಂಪ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಅನೇಕ ನದಿಗಳ ಹರಿವಿನಲ್ಲಿ ಬದಲಾವಣೆಯಾಗಿರುವುದನ್ನು ವಿಜ್ಞಾನಿಗಳು ದಾಖಲಿಸಿದ್ದಾರೆ. "ನದಿ ಪಾತ್ರದ ಪ್ರದೇಶಗಳಲ್ಲಿ ಭೂಕಂಪಗಳಿಂದ, ಅದರಲ್ಲೂ ವಿಶೇಷವಾಗಿ ಗಂಗಾನದಿಯಂತಹ ಅಗಾಧವಾದ ನದಿಯ ಹರಿವು ಬದಲಾಗಬಹುದು ಎಂಬುದು ಈ ಹಿಂದೆ ನಮಗೆ ತಿಳಿದಿರಲಿಲ್ಲ" ಎಂದು ನೆದರ್ಲ್ಯಾಂಡ್ಸ್ನ ವಾಗೆನಿಂಗನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಲಿಜ್ ಚೇಂಬರ್ಲಿನ್ ಹೇಳಿದ್ದಾರೆ.
ಉಪಗ್ರಹ ಚಿತ್ರಗಳನ್ನು ಅಧ್ಯಯನ ಮಾಡುವ ಮೂಲಕ ಚೇಂಬರ್ಲಿನ್ ಮತ್ತು ತಂಡವು ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ದಕ್ಷಿಣಕ್ಕೆ 100 ಕಿಲೋಮೀಟರ್ ದೂರದಲ್ಲಿ ಗಂಗಾ ನದಿ ಈ ಹಿಂದೆ ಹರಿಯುತ್ತಿದ್ದ ಪಾತ್ರವನ್ನು ಗುರುತಿಸಿದೆ. ಇದು ಸುಮಾರು 1.5 ಕಿಲೋಮೀಟರ್ ಅಗಲದ ತಗ್ಗು ಪ್ರದೇಶವಾಗಿದ್ದು, ಪ್ರಸ್ತುತ ನದಿ ಮಾರ್ಗಕ್ಕೆ ಹೆಚ್ಚು ಅಥವಾ ಕಡಿಮೆ ಸಮಾನಾಂತರವಾಗಿ ಸುಮಾರು 100 ಕಿಲೋಮೀಟರ್ ವರೆಗೆ ಮಧ್ಯಂತರವಾಗಿ ಕಂಡುಬರುತ್ತದೆ. ಮಣ್ಣಿನಿಂದ ತುಂಬಿರುವ ಈ ಪ್ರದೇಶ ಆಗಾಗ ಪ್ರವಾಹಕ್ಕೆ ಒಳಗಾಗುತ್ತಿರುತ್ತದೆ ಮತ್ತು ಇದನ್ನು ಮುಖ್ಯವಾಗಿ ಭತ್ತದ ಕೃಷಿಗೆ ಬಳಸಲಾಗುತ್ತದೆ.
ಈ ಹಳೆಯ ನದಿ ಪಾತ್ರದ ಪ್ರದೇಶದಲ್ಲಿ ಮರಳು ಜ್ವಾಲಾಮುಖಿಗಳು ಸ್ಫೋಟಗೊಂಡಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಜ್ವಾಲಾಮುಖಿಗಳ ಜಾಗದಲ್ಲಿ 30 ಅಥವಾ 40 ಸೆಂಟಿಮೀಟರ್ ಅಗಲದ ಕುಳಿ ಉಂಟಾಗಿದ್ದು ಇವು 3 ಅಥವಾ 4 ಮೀಟರ್ ಆಳವಾಗಿವೆ. ಸ್ಫೋಟಗಳು ಮತ್ತು ನದಿ ಪಾತ್ರ ಬದಲಾಗಿರುವುದು ಮತ್ತು ನದಿಯಲ್ಲಿ ನೀರು ತುಂಬುವಿಕೆ ಇವೆಲ್ಲವೂ ಸುಮಾರು 2,500 ವರ್ಷಗಳ ಹಿಂದೆ ನಡೆದಿವೆ ಎಂಬುದು ಮರಳು ಕಣಗಳು ಮತ್ತು ಮಣ್ಣಿನ ಕಣಗಳ ರಾಸಾಯನಿಕ ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ : ತಾಪಮಾನ ಏರಿಕೆಗೆ ಕಾರಣವಾಗುವ ನೈಟ್ರಸ್ ಆಕ್ಸೈಡ್ ಹೊರಸೂಸುವಿಕೆ ಶೇ 40ರಷ್ಟು ಹೆಚ್ಚಳ: ವರದಿ - nitrous oxide emissions