ನವದೆಹಲಿ: ಭಾರತೀಯ ಸೇನೆಗೆ ಮತ್ತೊಂದು ಶಕ್ತಿ ಬಂದಿದೆ. ಅಗ್ನಿ ಸರಣಿಯ ಹೊಸ ತಂತ್ರಜ್ಞಾನದ ಬ್ಯಾಲಿಸ್ಟಿಕ್ ಅಗ್ನಿ ಪ್ರೈಮ್ ಕ್ಷಿಪಣಿಯು ಯಶಸ್ವಿ ಉಡಾವಣೆ ಕಂಡಿದೆ. ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಮಿಸಿರುವ ಕ್ಷಿಪಣಿಯನ್ನು ನಿನ್ನೆ (ಬುಧವಾರ) ಸಂಜೆ 7 ಗಂಟೆ ಸುಮಾರಿಗೆ ಒಡಿಶಾದ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ಕೇಂದ್ರದಿಂದ ಉಡಾಯಿಸಲಾಗಿದೆ.
ಅಗ್ನಿ ಪ್ರೈಮ್ ಕ್ಷಿಪಣಿಯು ನಿಗದಿತ ಗುರಿ ಸಾಧಿಸಿದ್ದು, ಭಾರತೀಯ ಸೇನೆಗೆ ಮತ್ತೊಂದು ಕ್ಷಿಪಣಿ ಬಲ ಬಂದಂತಾಗಿದೆ. ಟರ್ಮಿನಲ್ ಪಾಯಿಂಟ್‌ನಲ್ಲಿ ಇರಿಸಲಾದ ಎರಡು ಡೌನ್‌ರೇಂಜ್ ಹಡಗುಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಹಲವಾರು ರೇಂಜ್ ಸೆನ್ಸಾರ್‌ಗಳಿಂದ ಡೇಟಾ ಕಲೆಹಾಕಲಾಗಿದ್ದು, ಕ್ಷಿಪಣಿಯು ಉದ್ದೇಶಿತ ಗುರಿಯನ್ನು ಮುಟ್ಟಿದೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದೆ.
ಉಡಾವಣೆಗೆ ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಮುಖ್ಯಸ್ಥರು, ಡಿಆರ್‌ಡಿಒ ಅಧಿಕಾರಿಗಳು ಮತ್ತು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು. ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒ, ಎಸ್‌ಎಫ್‌ಸಿ ಮತ್ತು ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಚೌಹಾಣ್ ಮತ್ತು ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್ ಅವರು ಶ್ಲಾಘಿಸಿದರು.
ಇದನ್ನೂ ಓದಿ: ಮತ್ತೊಮ್ಮೆ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ - Missile Test