ನವದೆಹಲಿ: ಹೇಳಿಕೇಳಿ ಇದು ಸಾಫ್ಟ್‌ವೇರ್, ಆನ್ಲೈನ್ ಕಾಲ. ಇಲ್ಲಿ ಕಂಪ್ಯೂಟರ್ ಮಾತ್ರವಲ್ಲದೆ, ಮೊಬೈಲ್ನಲ್ಲೂ ಇಂಟರ್ನೆಟ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಗೂಗಲ್ ಕ್ರೋಮ್ ಬ್ರೌಸರ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಅದು ಎಷ್ಟು ಸುರಕ್ಷಿತವಾಗಿದೆ ಎಂಬುದು ಪ್ರಶ್ನೆಯಾಗಿದೆ.
ಹೌದು, ನಿಮ್ಮ ಕಂಪ್ಯೂಟರ್ನಲ್ಲಿ ಗೂಗಲ್ ಕ್ರೋಮ್ ಬಳಸುತ್ತಿದ್ದೀರಾ ಎಚ್ಚರ. ನೀವು ಕಂಪ್ಯೂಟರ್ ಅನ್ನು ಆಫ್ ಮಾಡಿದ ಬಳಿಕವೂ ಹ್ಯಾಕರ್‌ಗಳು ನಿಮ್ಮಲ್ಲಿನ ಪ್ರಮುಖ ಮಾಹಿತಿಯನ್ನು ಕದಿಯಬಹುದು. ಇದಕ್ಕೆ ಕಾರಣ ಗೂಗಲ್ ಕ್ರೋಮ್ನಲ್ಲಿ ಲೋಪ. ಹ್ಯಾಕರ್‌ಗಳು ಅದನ್ನು ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇಂಥದ್ದೊಂದು ಎಚ್ಚರಿಕೆಯನ್ನು ಸರ್ಕಾರಿ ಸಂಸ್ಥೆಯಾದ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ನೀಡಿದೆ. Google Chrome ನ ಡೆಸ್ಕ್‌ಟಾಪ್ ಬಳಕೆದಾರರು ತ್ವರಿತವಾಗಿ ಎಚ್ಚರಿಕೆ ವಹಿಸಲು ಅದು ಸೂಚಿಸಿದೆ. ಗೂಗಲ್‌ನ ವೆಬ್ ಬ್ರೌಸರ್‌ನಲ್ಲಿ ಹಲವು ದೋಷಗಳನ್ನು ಸಂಸ್ಥೆಯು ಗುರುತಿಸಿದ್ದು, ಇದನ್ನೇ ಬಳಸಿಕೊಂಡು ನಿಮ್ಮ ಪ್ರಮುಖ ಮಾಹಿತಿಯನ್ನು ಹ್ಯಾಕರ್‌ಗಳು ಮತ್ತು ಸ್ಕ್ಯಾಮರ್‌ಗಳು ಪಡೆದುಕೊಳ್ಳಬಹುದು ಎಂದಿದೆ.
ಸೂಕ್ಷ್ಮ ಡೇಟಾಗೆ ಹ್ಯಾಕರ್ಗಳ ಕನ್ನ: CERT-In ಸಂಸ್ಥೆಯ ಪ್ರಕಾರ, ಸೈಬರ್ ಸ್ಕ್ಯಾಮರ್‌ಗಳು ಈ ಲೋಪವನ್ನು ಬಳಕೆದಾರರ ಸಿಸ್ಟಮ್‌ಗಳನ್ನು ಪ್ರವೇಶಿಸಿ ಸೂಕ್ಷ್ಮ ಡೇಟಾವನ್ನು ಕದಿಯಲು ಬಳಸಬಹುದು. ಇದು ಮಾತ್ರವಲ್ಲದೆ, ಸ್ಕ್ಯಾಮರ್‌ಗಳು ಬಳಕೆದಾರರ ಸಾಧನಗಳಿಗೆ ರಿಮೋಟ್ ಎಂಟ್ರಿ ಸಹ ಪಡೆಯಬಹುದು. ಆತಂಕಕಾರಿ ವಿಷಯವೆಂದರೆ, ಕಂಪ್ಯೂಟರ್ ಸಿಸ್ಟಮ್ ಅನ್ನು ಸ್ಥಗಿತಗೊಳಿಸಿದ (Shutdown) ನಂತರವೂ ಹ್ಯಾಕರ್‌ಗಳು ಆಪರೇಟ್ ಮಾಡಬಹುದಾಗಿದೆ. ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್ಗಳನ್ನು ತಮ್ಮ ವಶಕ್ಕೆ ಪಡೆದು ನಿಮ್ಮ ಸಾಧನದಲ್ಲಿ ಅಕ್ರಮವಾಗಿ ಕೋಡ್ ಅಥವಾ ಸಾಫ್ಟ್‌ವೇರ್ ಅನ್ನು ಇನ್ಸ್ಟಾಲ್ ಮಾಡಲಿದ್ದಾರೆ.
ಹ್ಯಾಕರ್ಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?: ಈ ಲೋಪದಿಂದ ರಕ್ಷಿಸಿಕೊಳ್ಳಲು ಗೂಗಲ್ ಕ್ರೋಮ್ ಬಳಕೆದಾರರು ಮೊದಲು ತಮ್ಮ ಕಂಪ್ಯೂಟರ್ನಲ್ಲಿನ Google Chrome ಅನ್ನು ಅಪ್ಡೇಟ್ ಮಾಡಿ. ವಿಂಡೋಸ್ ಅಥವಾ MacOS ಮೋಡಲ್ನ ಕಂಪ್ಯೂಟರ್ಗೆ 127.0.6533.88/89, Linux ಮೋಡಲ್ಗೆ 127.0.6533.88 ಅಪಡೇಟರ್ ವರ್ಷನ್ ಲಭ್ಯವಿದೆ.
ಕ್ರೋಮ್ ಅಪ್ಡೇಟ್ ಮಾಡುವುದು ಹೇಗೆ?: Google Chrome ಅನ್ನು ಅಪ್ಡೇಟ್ ಮಾಡಲು ಬಳಕೆದಾರರು ಮೊದಲು ಬ್ರೌಸರ್‌ನ ಮೆನು ಒತ್ತಬೇಕು. ನಂತರ, about ಗೂಗಲ್ ಕ್ರೋಮ್ ಅನ್ನು ಕ್ಲಿಕ್ಕಿಸಿ, ನಿಮ್ಮ ಸಾಫ್ಟ್‌ವೇರ್ ಅಪ್ಡೇಟ್ಗೆ ಲಭ್ಯವಿದ್ದಲ್ಲಿ, ನವೀಕೃತ ಮಾದರಿಯನ್ನು ಅಲ್ಲಿ ತೋರಿಸುತ್ತದೆ. ಅಪ್ಡೇಟ್ ಲಭ್ಯವಿದ್ದಲ್ಲಿ, ಅದು ತಾನಾಗೇ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ಗೂಗಲ್ ಆವಿಷ್ಕಾರದ ತಂತ್ರಜ್ಞೆ, ಯೂಟ್ಯೂಬ್ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಕ್ಯಾನ್ಸರ್ಗೆ ಬಲಿ - Susan Wojcicki Dies