ನವದೆಹಲಿ: ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಥವಾ ಯಂತ್ರ ಕಲಿಕೆ (ಮಶೀನ್ ಲರ್ನಿಂಗ್- ಎಂಎಲ್) ಉದ್ಯೋಗಗಳ ನೇಮಕಾತಿಯು ಹೆಚ್ಚಾಗುತ್ತಲೇ ಇದ್ದು, ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮಾರ್ಚ್ನಲ್ಲಿ ಈ ವಲಯದಲ್ಲಿ ಹೊಸ ಉದ್ಯೋಗಗಳ ಸಂಖ್ಯೆ ಶೇಕಡಾ 12 ರಷ್ಟು ಹೆಚ್ಚಳವಾಗಿದೆ ಎಂದು ಹೊಸ ವರದಿಯೊಂದು ಸೋಮವಾರ ತಿಳಿಸಿದೆ.
ನೌಕರಿ ಜಾಬ್ ಸ್ಪೀಕ್ ಸೂಚ್ಯಂಕದ ಪ್ರಕಾರ, ಮಶೀನ್ ಲರ್ನಿಂಗ್ ಎಂಜಿನಿಯರ್ ಹುದ್ದೆಗಳ ನೇಮಕಾತಿಯು ಮಾರ್ಚ್ 2024 ರಲ್ಲಿ ಶೇಕಡಾ 82 ರಷ್ಟು ಏರಿಕೆಯಾಗಿದೆ. ಫುಲ್ ಸ್ಟ್ಯಾಕ್ ಡೇಟಾ ಸೈಂಟಿಸ್ಟ್ ಹುದ್ದೆಗಳ ನೇಮಕಾತಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 20 ರಷ್ಟು ಬೆಳವಣಿಗೆ ದಾಖಲಿಸಿದೆ.
ಇದಲ್ಲದೇ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್ 2024 ರಲ್ಲಿ ತೈಲ ಮತ್ತು ಅನಿಲ ವಲಯದಲ್ಲಿ ನೇಮಕಾತಿ ಶೇಕಡಾ 22 ರಷ್ಟು ಹೆಚ್ಚಾಗಿದೆ. ಈ ವಲಯದಲ್ಲಿ ಎಂಇಪಿ ಎಂಜಿನಿಯರ್ಗಳು ಮತ್ತು ಎಲೆಕ್ಟ್ರಿಕಲ್ ಎಂಜಿನಿಯರ್ಗಳಿಗೆ ಗರಿಷ್ಠ ಬೇಡಿಕೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಹಮದಾಬಾದ್ ಮತ್ತು ಹೈದರಾಬಾದ್ ನಗರಗಳಲ್ಲಿ ಈ ವಲಯದಲ್ಲಿ ನೇಮಕಾತಿ ವಿಶೇಷವಾಗಿ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಾರ್ಮಾ ವಲಯದಲ್ಲಿ ನೇಮಕಾತಿ ಶೇಕಡಾ 2 ರಷ್ಟು ಬೆಳವಣಿಗೆಯಾಗಿದೆ.
16 ವರ್ಷಗಳ ಅನುಭವ ಹೊಂದಿರುವ ಹಿರಿಯ ವೃತ್ತಿಪರರನ್ನು ಗರಿಷ್ಠವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ವರ್ಷದ ಮಾರ್ಚ್ನಲ್ಲಿ ಈ ವಿಭಾಗದಲ್ಲಿನ ನೇಮಕಾತಿಯು ಶೇಕಡಾ 11 ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ನಗರವಾರು, ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸ ಉದ್ಯೋಗ ಸೃಷ್ಟಿಯಲ್ಲಿ ಜೋಧ್ಪುರ ಶೇಕಡಾ 13 ರಷ್ಟು ನೇಮಕಾತಿ ಬೆಳವಣಿಗೆಯೊಂದಿಗೆ ಮುಂಚೂಣಿಯಲ್ಲಿದ್ದರೆ, ರಾಜ್ಕೋಟ್, ರಾಯ್ಪುರ ಮತ್ತು ಗುವಾಹಟಿ ಕ್ರಮವಾಗಿ ಶೇಕಡಾ 12, ಶೇಕಡಾ 7 ಮತ್ತು 6 ರಷ್ಟು ಹೊಸ ಉದ್ಯೋಗ ಸೃಷ್ಟಿಯೊಂದಿಗೆ ನಂತರದ ಸ್ಥಾನಗಳಲ್ಲಿವೆ.
ಆ್ಯಪಲ್ನ ಬಿಡಿಭಾಗ ತಯಾರಕ ಮತ್ತು ಪೂರೈಕೆದಾರರ ಘಟಕಗಳು ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ ಸುಮಾರು ಐದು ಲಕ್ಷ ಜನರಿಗೆ ನೇರವಾಗಿ ಉದ್ಯೋಗ ನೀಡಬಹುದು ಎಂದು ವರದಿಗಳು ಹೇಳಿವೆ. ಆ್ಯಪಲ್ ಚೀನಾದಲ್ಲಿನ ತನ್ನ ಒಟ್ಟು ಉತ್ಪಾದನೆಯ ಕನಿಷ್ಠ ಅರ್ಧದಷ್ಟನ್ನು ಭಾರತಕ್ಕೆ ಸ್ಥಳಾಂತರಿಸಲು ಯೋಜಿಸಿದೆ. ಭಾರತದಲ್ಲಿ ಈಗಾಗಲೇ 1.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಆಪಲ್ ಕಂಪನಿಯು ದೇಶದ ಅತಿದೊಡ್ಡ ಬ್ಲೂ ಕಾಲರ್ ಉದ್ಯೋಗ ಸೃಷ್ಟಿಕರ್ತನಾಗಿ ಹೊರ ಹೊಮ್ಮಿದೆ.
ಇದನ್ನೂ ಓದಿ : ಕೌಶಲ್ಯ ಆಧಾರಿತ ಇಸ್ಪೋರ್ಟ್ ಗೇಮಿಂಗ್ಗೆ ನಿಯಂತ್ರಣ ಹೇರುವ ಅಗತ್ಯವಿಲ್ಲ: ಪ್ರಧಾನಿ ಮೋದಿ - eSport