ನಕಲಿ ದಾಖಲೆಗಳ ಮೂಲಕ ತೆಗೆದುಕೊಂಡ 1.77 ಕೋಟಿ ಮೊಬೈಲ್ ಫೋನ್ಗಳ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಬಗ್ಗೆ AI ಮೂಲಕ ಪತ್ತೆ ಮಾಡಲಾಗಿದೆ. ಅಲ್ಲದೆ, ನಾಲ್ಕು ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿ) ದೂರಸಂಪರ್ಕ ಇಲಾಖೆ (ಡಿಒಟಿ) ಸಹಯೋಗದೊಂದಿಗೆ ಸುಧಾರಿತ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಇದರ ಅಡಿಯಲ್ಲಿ ಇದುವರೆಗೆ 45 ಲಕ್ಷ ವಂಚನೆಯ ಅಂತಾರಾಷ್ಟ್ರೀಯ ಕರೆಗಳನ್ನು ಭಾರತೀಯ ಟೆಲಿಕಾಂ ನೆಟ್‌ವರ್ಕ್‌ಗೆ ಬಾರದಂತೆ ನಿರ್ಬಂಧಿಸಲಾಗಿದೆ.
ಮುಂದಿನ ಹಂತದಲ್ಲಿ ಎಲ್ಲಾ TSPಗಳಲ್ಲಿ ಉಳಿದಿರುವ ನಕಲಿ ಕರೆಗಳನ್ನು ತೆಗೆದುಹಾಕುವ ಕೇಂದ್ರೀಕೃತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ವ್ಯವಸ್ಥೆಯು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಟೆಲಿಕಾಂ ಸಚಿವಾಲಯ ತಿಳಿಸಿದೆ.
ದೂರಸಂಪರ್ಕ ಇಲಾಖೆಯು ಸುಧಾರಿತ ವ್ಯವಸ್ಥೆಯನ್ನು ಪರಿಚಯಿಸಿದೆ. ಅಂತಾರಾಷ್ಟ್ರೀಯ ನಕಲಿ ಕರೆಗಳನ್ನು ಗುರುತಿಸಲು ಮತ್ತು ಗ್ರಾಹಕರನ್ನು ತಲುಪುವ ಮೊದಲು ಅವುಗಳನ್ನು ನಿರ್ಬಂಧಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಸುಮಾರು 49,930 ಮೊಬೈಲ್ ಫೋನ್ಗಳನ್ನೂ ಸಹ ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
49,930 ಮೊಬೈಲ್ ಬ್ಲಾಕ್: ಇದರಲ್ಲಿ, ಸೈಬರ್ ಅಪರಾಧಗಳ ಹಾಟ್ ಸ್ಪಾಟ್ ಆಗಿರುವ ಜಿಲ್ಲೆಗಳಲ್ಲೇ 33.48 ಲಕ್ಷ ಮೊಬೈಲ್ ಸಂಪರ್ಕಗಳನ್ನು ಬಂದ್ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ 49,930 ಮೊಬೈಲ್ಗಳನ್ನು ನಿರ್ಬಂಧಿಸಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚು ಮೊಬೈಲ್ ಸಂಪರ್ಕ ಪಡೆದವರ 77.61 ಲಕ್ಷ ಮೊಬೈಲ್ ಸಂಪರ್ಕಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸೈಬರ್ ಅಪರಾಧ ಅಥವಾ ವಂಚನೆ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ಒಟ್ಟು 2.29 ಲಕ್ಷ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲಾಗಿದೆ. ಇಲ್ಲಿಯವರೆಗೆ ನೋಂದಾಯಿಸಲಾದ ಒಟ್ಟು 21.03 ಕಳೆದುಹೋದ ಮೊಬೈಲ್ ಫೋನ್‌ಗಳಲ್ಲಿ 12.02 ಲಕ್ಷ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. ಬ್ಯಾಂಕ್‌ಗಳು ಮತ್ತು ಪಾವತಿ ವಾಲೆಟ್‌ಗಳ ಲಿಂಕ್ ಹೊಂದಿದ್ದ ಮೊಬೈಲ್ ಸಂಪರ್ಕಗಳ ಸುಮಾರು 11 ಲಕ್ಷ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಸುಮಾರು 11 ಲಕ್ಷ ವಾಟ್ಸ್ಆ್ಯಪ್ ಪ್ರೊಫೈಲ್‌ಗಳು/ಖಾತೆಗಳನ್ನು ರದ್ದು ಮಾಡಲಾಗಿದೆ. ಇವು ನಕಲಿ ದಾಖಲೆಗಳ ಮೇಲೆ ತೆಗೆದುಕೊಂಡ ಬಳಿಕ ಸಂಪರ್ಕ ಕಡಿತಗೊಳಿಸಲಾಗಿದ್ದ ಮೊಬೈಲ್ ಸಂಪರ್ಕಗಳಿಗೆ ಲಿಂಕ್ ಹೊಂದಿದ್ದವು. ಇದುವರೆಗೆ 71,000 ಪಾಯಿಂಟ್ ಆಫ್ ಸೇಲ್ (ಸಿಮ್ ಏಜೆಂಟ್)ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ಸಂಬಂಧ 365 ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೂರಸಂಪರ್ಕ ಇಲಾಖೆ ಮಾಹಿತಿ ನೀಡಿದೆ.