ನವದೆಹಲಿ: ಚೀನಾದಲ್ಲಿ 2024ರ ಮೊದಲ ತ್ರೈಮಾಸಿಕದಲ್ಲಿ (ಕ್ಯೂ 1) ಆ್ಯಪಲ್ ಸ್ಮಾರ್ಟ್ಫೋನ್ ಮಾರಾಟ ಶೇಕಡಾ 19.9 ರಷ್ಟು ಕುಸಿದಿದೆ ಎಂದು ಹೊಸ ವರದಿ ಮಂಗಳವಾರ ತಿಳಿಸಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಪ್ರೀಮಿಯಂ ವಿಭಾಗದಲ್ಲಿ ಹುವಾವೇ ಸ್ಮಾರ್ಟ್ಫೋನ್ಗಳ ಮಾರಾಟ ಚೇತರಿಸಿಕೊಂಡಿದ್ದರಿಂದ ಆ್ಯಪಲ್ನ ಮಾರಾಟ ಕುಸಿದಿದೆ.
"ಹುವಾವೇ ಸ್ಮಾರ್ಟ್ಫೋನ್ಗಳ ಚೇತರಿಕೆಯಿಂದ ಪ್ರೀಮಿಯಂ ವಿಭಾಗದಲ್ಲಿ ಆ್ಯಪಲ್ ಫೋನ್ಗಳ ಮಾರಾಟದ ಮೇಲೆ ನೇರವಾಗಿ ಪರಿಣಾಮ ಬೀರಿದ್ದರಿಂದ ತ್ರೈಮಾಸಿಕದಲ್ಲಿ ಆ್ಯಪಲ್ನ ಮಾರಾಟ ಕಡಿಮೆಯಾಗಿದೆ. ಇದಲ್ಲದೇ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆ್ಯಪಲ್ಗೆ ಬದಲಿ ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ" ಎಂದು ಹಿರಿಯ ಸಂಶೋಧನಾ ವಿಶ್ಲೇಷಕ ಇವಾನ್ ಲ್ಯಾಮ್ ಹೇಳಿದ್ದಾರೆ.
ಕೌಂಟರ್ ಪಾಯಿಂಟ್ ಅಂಕಿ - ಅಂಶಗಳ ಪ್ರಕಾರ, ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾ ಮೂಲದ ಪ್ರತಿಸ್ಪರ್ಧಿ ಕಂಪನಿಗಳಾದ ವಿವೋ ಮತ್ತು ಹಾನರ್ ಸ್ಮಾರ್ಟ್ಫೋನ್ಗಳ ಮಾರಾಟ ಆ್ಯಪಲ್ ಅನ್ನು ಮೀರಿಸಿದೆ. ಆ್ಯಪಲ್ ತ್ರೈಮಾಸಿಕದಲ್ಲಿ ಮಾರುಕಟ್ಟೆಯ ಶೇ 15.7 ರಷ್ಟು ಪಾಲು ಹೊಂದಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 19.7 ರಷ್ಟಿತ್ತು. ಹಾಗೆಯೇ ಹುವಾವೇಯ ಮಾರುಕಟ್ಟೆ ಪಾಲು ಶೇ 15.5 ಕ್ಕಿಂತ ಸ್ವಲ್ಪ ಹೆಚ್ಚಾಗಿದೆ.
ಹುವಾವೇ ಇತ್ತೀಚೆಗೆ ಪ್ಯೂರಾ 70 ಎಂಬ ಹೊಸ ಸರಣಿಯ ಸ್ಮಾರ್ಟ್ ಫೋನ್ಗಳನ್ನು ಬಿಡುಗಡೆ ಮಾಡಿದೆ. ಇದು ಐಫೋನ್ ಪ್ರೊ ಶ್ರೇಣಿಯಲ್ಲಿನ ಮೂರು ಲೆನ್ಸ್ ಗಳಿಗೆ ಹೋಲುವ ಸುಧಾರಿತ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. 760 ಡಾಲರ್ ನಿಂದ ಪ್ರಾರಂಭವಾಗುವ ಈ ಹೊಸ ಹುವಾವೇ ಫೋನ್ಗಳು ಆ್ಯಪಲ್ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಆದಾಗ್ಯೂ ಐಫೋನ್ ಮಾರಾಟ ಚೇತರಿಕೆಯಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ. ವಾರದಿಂದ ವಾರಕ್ಕೆ ನಿಧಾನವಾಗಿ, ಆದರೆ ಸ್ಥಿರವಾಗಿ ಆ್ಯಪಲ್ ಫೋನ್ಗಳ ಮಾರಾಟ ಮತ್ತೆ ಚೇತರಿಕೆಯಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಚೀನಾದ ಸ್ಮಾರ್ಟ್ ಫೋನ್ ಮಾರುಕಟ್ಟೆ ಆ್ಯಪಲ್ಗೆ ಬಹಳ ಮುಖ್ಯವಾಗಿದೆ. ಅಮೆರಿಕದ ನಂತರ ಚೀನಾವೇ ಆ್ಯಪಲ್ನ ಅತಿದೊಡ್ಡ ಮಾರುಕಟ್ಟೆಯಾಗಿದೆ.
ಆ್ಯಪಲ್ ಈ ವರ್ಷ ಅನೇಕ ಕಾನೂನಾತ್ಮಕ ಹೋರಾಟಗಳನ್ನು ನಡೆಸುತ್ತಿದೆ. ಮಾರ್ಚ್ನಲ್ಲಿ ಯುರೋಪಿಯನ್ ಕಮಿಷನ್ ಆ್ಯಪಲ್ಗೆ ಸುಮಾರು 1.8 ಬಿಲಿಯನ್ ಯುರೋ (1.95 ಬಿಲಿಯನ್ ಡಾಲರ್) ದಂಡ ವಿಧಿಸಿದೆ. ಅಮೆರಿಕದಲ್ಲಿ ಆ್ಯಪಲ್ ನ್ಯಾಯಾಂಗ ಇಲಾಖೆಯಿಂದ ಆ್ಯಂಟಿಟ್ರಸ್ಟ್ ಮೊಕದ್ದಮೆ ಎದುರಿಸುತ್ತಿದೆ.
ಇದನ್ನೂ ಓದಿ : ಭಾರತದಲ್ಲಿ 93 ಕೋಟಿ ದಾಟಿದ ಇಂಟರ್ನೆಟ್ ಬಳಕೆದಾರರ ಸಂಖ್ಯೆ: ಟ್ರಾಯ್ - Internet Users In India