Google Air View+: ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಹೈಪರ್‌ಲೋಕಲ್ ವಾಯು ಗುಣಮಟ್ಟದ ಮಾಹಿತಿ ನೀಡಲು ಏರ್ ವ್ಯೂ+ ಫೀಚರ್ ಅನ್ನು ಗೂಗಲ್ ಪರಿಚಯಿಸಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ಏರುತ್ತಿರುವ ವೇಳೆಯಲ್ಲಿ ಹೊಸ ಫೀಚರ್ ಹೊರ ಬಂದಿದೆ.
ವಾಯು ಮಾಲಿನ್ಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಾಯು ಗುಣಮಟ್ಟದ ಮೇಲಿನ ಅಪೂರ್ಣ ಮಾಹಿತಿಯಿಂದಾಗಿ ಹೈಪರ್‌ಲೋಕಲ್ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸೀಮಿತಗೊಳಿಸಲಾಗಿದೆ. ಸ್ಥಳೀಯ ಹವಾಮಾನ ತಂತ್ರಜ್ಞಾನ ಸಂಸ್ಥೆಗಳು ಮತ್ತು ಸ್ಥಳೀಯ ಸ್ಟಾರ್ಟಪ್‌ಗಳು, ಸಂಶೋಧಕರು/ಕ್ಲೈಮೆಟ್ ಆ್ಯಕ್ಷನ್ ಗುಂಪುಗಳು, ನಿಗಮಗಳು, ನಗರ ನಿರ್ವಾಹಕರು ಮತ್ತು ನಾಗರಿಕರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಈ ಸವಾಲನ್ನು ಎದುರಿಸಲು ಗೂಗಲ್ ನೆರವಾಗಿದೆ. ಇದಕ್ಕಾಗಿ ಏರ್ ವ್ಯೂ+ ಪರಿಚಯಿಸಿದೆ.
ಈ ಹಿಂದೆ ವಾಯು ಗುಣಮಟ್ಟದ ಮೇಲ್ವಿಚಾರಣೆಗೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿರುವ ನಗರಗಳಲ್ಲಿ ಏರ್ ಕ್ವಾಲಿಟಿ ಸೆನ್ಸಾರ್ ನೆಟ್‌ವರ್ಕ್ ಸ್ಥಾಪಿಸುವಲ್ಲಿ ಕ್ಲೈಮೇಟ್ ಟೆಕ್ ಸಂಸ್ಥೆಗಳಾದ Aurasure ಮತ್ತು Respirer Living Sciences ಪ್ರಮುಖ ಪಾತ್ರ ವಹಿಸಿದ್ದವು ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ಹೇಳಿದೆ. ಈ ಸೆನ್ಸಾರ್ಗಳು ತಾಪಮಾನ ಮತ್ತು ತೇವಾಂಶದ ಜೊತೆಗೆ PM2.5, PM10, CO2, NO2, ಓಝೋನ್ ಮತ್ತು VOCಗಳಂತಹ ಗಾಳಿಯ ಗುಣಮಟ್ಟದ ನಿಯತಾಂಕಗಳನ್ನು ಪ್ರತೀ ನಿಮಿಷಕ್ಕೆ ಅಳತೆ ಮಾಡುತ್ತವೆ. ಈ ಸೆನ್ಸಾರ್ಗಳನ್ನು ಆಡಳಿತ ಸಂಸ್ಥೆಗಳು, ಯುಟಿಲಿಟಿ ಪೊಲೆಸ್, ವಾಣಿಜ್ಯ ಕಟ್ಟಡಗಳು ಇತ್ಯಾದಿಗಳಂತಹ 150ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ, ಅವುಗಳು ನಿರಂತರವಾಗಿ ಏರ್ ಕ್ವಾಲಿಟಿಯನ್ನು ಮೇಲ್ವಿಚಾರಣೆ ಮಾಡುತ್ತಲೇ ಇರುತ್ತವೆ.
ಐಐಟಿ ದೆಹಲಿ, ಐಐಟಿ ಹೈದರಾಬಾದ್, ರಾಜ್ಯ ಮಾಲಿನ್ಯ ಮಂಡಳಿಗಳು ಮತ್ತು CSTEPನಂತಹ ಕ್ಲೈಮೆಟ್ ಆ್ಯಕ್ಷನ್ ಗುಂಪುಗಳ ಸ್ಥಳೀಯ ಸಂಶೋಧಕರ ಬೆಂಬಲದೊಂದಿಗೆ ಈ ಸೆನ್ಸಾರ್ಗಳನ್ನು ಕಟ್ಟುನಿಟ್ಟಾಗಿ ಮೌಲ್ಯೀಕರಿಸಲಾಗಿದೆ. ಒಳನೋಟಗಳನ್ನು ತ್ವರಿತವಾಗಿ ಮತ್ತು ಪ್ರಮಾಣದಲ್ಲಿ ಲೆಕ್ಕಾಚಾರ ಮಾಡಲು ಸಂಶೋಧಕರು ಮತ್ತು ಸಮರ್ಥನೀಯ ಸ್ಟಾರ್ಟಪ್‌ಗಳಿಂದ ಗೂಗಲ್ ಎಐ ಅನ್ನು ಬಳಸಿಕೊಂಡು ಡೇಟಾವನ್ನು ವಿಶ್ಲೇಷಿಸಲಾಗಿದೆ ಎಂದು ಗೂಗಲ್ ಹೇಳಿದೆ.
ಗೂಗಲ್ ಎಐನಿಂದ ನಡೆಸಲ್ಪಡುವ ಏರ್ ವ್ಯೂ+, ಭಾರತದಾದ್ಯಂತ ಬಳಕೆದಾರರಿಗೆ ಗೂಗಲ್ ಮ್ಯಾಪ್ಸ್‌ನಲ್ಲಿ ರಿಯಲ್-ಟೈಂನ ಹೈಪರ್‌ಲೋಕಲ್ ವಾಯು ಗುಣಮಟ್ಟದ ಮಾಹಿತಿ ನೀಡುತ್ತದೆ. ಅಷ್ಟೇ ಅಲ್ಲ, ಪರಿಸರ ಮೇಲ್ವಿಚಾರಣೆ ಮತ್ತು ನಗರ ಯೋಜನೆಗೆ ಜವಾಬ್ದಾರರಾಗಿರುವ ಸರ್ಕಾರಿ ಏಜೆನ್ಸಿಗಳಿಗೆ ಮೌಲ್ಯಯುತವಾದ ವಾಯು ಗುಣಮಟ್ಟದ ಒಳನೋಟಗಳು ಲಭ್ಯವಾಗುವಂತೆ ಮಾಡುತ್ತದೆ.
ಬಳಕೆದಾರರು ಇದೀಗ ಗೂಗಲ್ ಮ್ಯಾಪ್ಸ್ ಬಳಸಿಕೊಂಡು ಭಾರತದಾದ್ಯಂತ ಹೈಪರ್‌ಲೋಕಲ್ ವಾಯು ಗುಣಮಟ್ಟದ ಮಾಹಿತಿ ಪಡೆಯಬಹುದಾಗಿದೆ. ಸೆನ್ಸಾರ್ ನೆಟ್‌ವರ್ಕ್‌ಗಳು, ಸರ್ಕಾರಿ ಡೇಟಾ, ಉಪಗ್ರಹ ಚಿತ್ರಣ, ಹವಾಮಾನ ಮತ್ತು ವಾಯು ಮಾದರಿಗಳು, ಟ್ರಾಫಿಕ್ ಪರಿಸ್ಥಿತಿಗಳು, ಲ್ಯಾಂಡ್ ಕವರ್ ಸೇರಿದಂತೆ ಹೆಚ್ಚಿನವುಗಳಂತಹ ವಿವಿಧ ಇನ್‌ಪುಟ್ ಮೂಲಗಳಿಂದ ಡೇಟಾವನ್ನು ಒಟ್ಟುಗೂಡಿಸುವ ಮಲ್ಟಿ-ಲೆಯರ್ಡ್ ಎಐ ವಿಧಾನವನ್ನು ಬಳಸಿಕೊಂಡು ಗೂಗಲ್ ಇದನ್ನು ಸಾಧಿಸಿದೆ.
ಗೂಗಲ್ ಮ್ಯಾಪ್ಸ್‌ನಲ್ಲಿ AQI ಒಳನೋಟಗಳಿಗಾಗಿ, ಹೋಮ್ ಸ್ಕ್ರೀನ್‌ನಲ್ಲಿರುವ ಲೇಯರ್ ಬಟನ್‌ನಿಂದ ಏರ್ ಕ್ವಾಲಿಟಿ ಲೇಯರ್ ಆಯ್ಕೆ ಮಾಡಬೇಕು. ಬಳಿಕ ನೀವು ಮ್ಯಾಪ್ನಲ್ಲಿ ಯಾವುದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ಆಗ ಅದು ಆ ಸ್ಥಳದ AQI ಮಾಹಿತಿ ನೀಡುತ್ತದೆ.
ಇದನ್ನೂ ಓದಿ: ಕ್ರೋಮ್ಒಎಸ್ ಅನ್ನು ಆಂಡ್ರಾಯ್ಡ್ ಆಗಿ ಬದಲಾಯಿಸುತ್ತಿರುವ ಗೂಗಲ್