ಪ್ರಮೋದ್ ಶೆಟ್ಟಿ ಕನ್ನಡ ಚಿತ್ರರಂಗದ ಜನಪ್ರಿಯ ನಟ. ಬಹುತೇಕ ಸಿನಿಮಾಗಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು 'ಲಾಫಿಂಗ್ ಬುದ್ದ' ಸಿನಿಮಾ ಮೂಲಕ ನಾಯಕ ನಟನಾಗಿ ಹೊರಹೊಮ್ಮಿದರು. 'ಜಲಂಧರ' ಶೆಟ್ರ ಎರಡನೇ ಚಿತ್ರ. ಪ್ರಮೋದ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದು, ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ.
ಥ್ರಿಲ್ಲಿಂಗ್ ಕಥೆಯನ್ನೊಳಗೊಂಡಿರುವ ಪ್ರಮೋದ್ ಶೆಟ್ಟಿ ಮುಖ್ಯಭೂಮಿಕೆಯ 'ಜಲಂಧರ' ಚಿತ್ರದ ಟ್ರೇಲರ್ ಅನ್ನು ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಸಿನಿಮಾ ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ. ಈ ಮೂಲಕ ತಮ್ಮ ಆಪ್ತ ಸ್ನೇಹಿತನ ಸಿನಿಮಾಗೆ ಸೂಪರ್ ಸ್ಟಾರ್ ಸಾಥ್ ಕೊಟ್ಟಿದ್ದಾರೆ.
'ಜಲಂಧರ' ಜಲದಾಳದಲ್ಲಿಅಡಗಿರುವ ಕಥೆ. ಟ್ರೇಲರ್ ಅನೇಕ ಟ್ವಿಸ್ಟ್ಗಳನ್ನು ಒಳಗೊಂಡಿದ್ದು, ಸಿನಿಮಾ ವೀಕ್ಷಿಸುವ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಯಾವುದೋ ಅಪರಾಧದ ಬೆನ್ನತ್ತಿರುವ ತಂಡ. ಪರಿಶೀಲನೇ ವೇಳೆ ಎದುರಾಗುವ ತಿರುವುಗಳು, ಸವಾಲುಗಳು. ಸಿನಿಮಾ ಸಕತ್ ಥ್ರಿಲ್ಲಿಂಗ್ ಆಗಿದೆ ಎಂಬ ಸುಳಿವನ್ನು ಟ್ರೇಲರ್ ಬಿಟ್ಟುಕೊಟ್ಟಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.
ಜಲಂಧರ ಚಿತ್ರಕ್ಕೆ ಸ್ಟಪ್ಅಪ್ ಲೋಕಿ ಕಥೆ ಬರೆದಿದ್ದು, ವಿಷ್ಣು ವಿ ಪ್ರಸನ್ನ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಾಯಕ ಪ್ರಮೋದ್ ಶೆಟ್ಟಿ ಜೊತೆ ಟಗರು ಖ್ಯಾತಿಯ ರಿಶಿಕಾ ರಾಜ್ ಹಾಗೂ ಅಧ್ಯಕ್ಷ ಖ್ಯಾತಿಯ ಆರೋಹಿತ ಗೌಡ ತೆರೆ ಹಂಚಿಕೊಂಡಿದ್ದಾರೆ. ಬಲ ರಾಜವಾಡಿ, ನವೀನ್ ಸಾಗರ್, ಪ್ರತಾಪ್, ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ, ಪ್ರಸಾದ್, ವಿಜಯರಾಜ್, ಅಂಬು, ನಟರಾಜ್ ಬೆಳ್ಳಿದೀಪ, ವಿಶಾಲ್ ಪಾಟೀಲ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೊಂದು ಜಲದೊಳಗಿನ ಮತ್ತು ಅಪರೂಪದ ಕಥೆಯಾಗಿದ್ದು, ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.
ಇದನ್ನೂ ಓದಿ: 'ಇಲ್ಲಿ ಕೀಳುಮಟ್ಟಕ್ಕಿಳಿದಿದ್ದಾರೆ, ನಾನು ಸಿಂಗಲ್ ಸಿಂಹ': ಬಿಗ್ ಬಾಸ್ನಲ್ಲಿ ಗುಡುಗಿದ ಚೈತ್ರಾ ಕುಂದಾಪುರ
ಈ ಸಿನಿಮಾವನ್ನು ಮದನ್ ಜೊತೆ ಚಂದ್ರಮೋಹನ್ ಸಿ.ಎಲ್, ರಮೇಶ್ ರಾಮಚಂದ್ರ, ಪದ್ಮನಾಭನ್ ಮಂಗುದೊಡ್ಡಿ ಸೇರಿ ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ. ರಶ್ಮಿತ್ ಕುಮಾರ್ ಕಾರ್ಯಕಾರಿ ನಿರ್ಮಾಪಕರು. ವಿಷ್ಣು ವಿ.ಪ್ರಸನ್ನ ನಿರ್ದೇಶಿಸಿದ್ದು, ಅಕ್ಷಯ್ ಕುಮಾರ್ ಎಂ ಸಹ ನಿರ್ದೇಶಕರು. ವೆಂಕಿ ಮತ್ತು ಸತೀಶ್ ಸಂಕಲನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಸರಿನ್ ರವಿಂದ್ರನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಶ್ರೀಮುರಳಿಯ 'ಬಘೀರ' ವೀಕ್ಷಿಸಿಲ್ವೇ? ಹಾಗಾದ್ರೆ ಈ ಒಟಿಟಿಯಲ್ಲಿ ನೋಡಿ: ಈವರೆಗಿನ ಕಲೆಕ್ಷನ್ ಮಾಹಿತಿ ನಿಮಗಾಗಿ
ಈ ಹಿಂದೆ ಸಿನಿಮಾ ಪ್ರಮೋಶನ್ ಈವೆಂಟ್ನಲ್ಲಿ ಮಾತನಾಡಿದ್ದ ನಾಯಕ ನಟ ಪ್ರಮೋದ್ ಶೆಟ್ಟಿ, ಇಲ್ಲಿ ಕಥೆಯೇ ಹೀರೋ. ಈ ಚಿತ್ರದಲ್ಲೂ ಪೊಲೀಸ್ ಪಾತ್ರ ನಿರ್ವಹಿಸಿದ್ದೇನೆ. ಗಂಭೀರ ಪಾತ್ರ. ಕಥೆ, ಅಭಿನಯಿಸಿರುವ ಎಲ್ಲರೂ ನಾಯಕರೇ. ಕನಕಪುರ ಭಾಗದ ಜಾನಪದ ಕಲೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದರು. ನವೆಂಬರ್ 29ಕ್ಕೆ 'ಜಲಂಧರ' ಚಿತ್ರಮಂದಿರ ಪ್ರವೇಶಿಸಲಿದ್ದಾನೆ.