ನವದೆಹಲಿ: ಭಾರತದಲ್ಲಿ ಆರೋಗ್ಯ, ಆತಿಥ್ಯ ಮತ್ತು ಎಫ್ಎಂಸಿಜಿಯಂತಹ ಕ್ಷೇತ್ರಗಳ ಜೊತೆಗೆ ಎಐ ವಲಯದಲ್ಲಿನ ಉದ್ಯೋಗ ನೇಮಕಾತಿಗಳು ಜನವರಿಯಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ ಎಂದು ಹೊಸ ವರದಿಯೊಂದು ಮಂಗಳವಾರ ಬಹಿರಂಗಪಡಿಸಿದೆ. ನೌಕರಿ ಜಾಬ್ಸ್ಪೀಕ್ ಇಂಡೆಕ್ಸ್ ಪ್ರಕಾರ, ಭಾರತದಲ್ಲಿ ವೈಟ್-ಕಾಲರ್ ನೇಮಕಾತಿಯು 2024 ರ ಜನವರಿಯಲ್ಲಿ 2,455 ರಷ್ಟಿತ್ತು. ಇದು ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇಕಡಾ 1ರಷ್ಟು ಹೆಚ್ಚಳವಾಗಿದೆ ಮತ್ತು ಕಳೆದ ವರ್ಷಕ್ಕಿಂತ ಶೇ.11ರಷ್ಟು ಕಡಿಮೆಯಾಗಿದೆ.
ಹಿರಿಯ ವೃತ್ತಿಪರರು ಮತ್ತು ಪ್ರೀಮಿಯಂ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ ಎಐನಲ್ಲಿ ಹೊಸ ಉದ್ಯೋಗಗಳು ಶೇ.12ರಷ್ಟು ಹೆಚ್ಚಾಗಿವೆ.
"ಎಐ ಸಂಬಂಧಿತ ಉದ್ಯೋಗಗಳಲ್ಲಿನ ಗಮನಾರ್ಹ ಹೆಚ್ಚಳವು ಐಟಿ ವಲಯದಲ್ಲಿ ಬದಲಾಗುತ್ತಿರುವ ಕೌಶಲ್ಯ ಅವಶ್ಯಕತೆಗಳನ್ನು ಸೂಚಿಸುತ್ತದೆ. ಹಾಗೆಯೇ ಹೆಲ್ತ್ಕೇರ್, ಹಾಸ್ಪಿಟಾಲಿಟಿ ಮತ್ತು ಎಫ್ಎಂಸಿಜಿ ವಲಯಗಳಲ್ಲಿನ ನೇಮಕಾತಿ ಹೆಚ್ಚಳವು ಬಲವಾದ ದೇಶೀಯ ಆರ್ಥಿಕತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ನೌಕ್ರಿ ಡಾಟ್ ಕಾಮ್ನ ಮುಖ್ಯ ವ್ಯವಹಾರ ಅಧಿಕಾರಿ ಡಾ.ಪವನ್ ಗೋಯಲ್ ಹೇಳಿದರು.
ವರದಿಯ ಪ್ರಕಾರ, ಮೆಷಿನ್ ಲರ್ನಿಂಗ್ ಎಂಜಿನಿಯರ್ ಮತ್ತು ಫುಲ್ ಸ್ಟ್ಯಾಕ್ ಎಐ ಸೈಂಟಿಸ್ಟ್ನಂಥ ಪ್ರಮುಖ ಎಐ ಹುದ್ದೆಗಳ ನೇಮಕಾತಿಯು ಕ್ರಮವಾಗಿ ಶೇ.46 ಮತ್ತು ಶೇ.23ರಷ್ಟು ಏರಿಕೆಯಾಗಿದೆ. ಡೇಟಾ ಸೈಂಟಿಸ್ಟ್ ನಂಥ ಸಾಂಪ್ರದಾಯಿಕ ಎಐ ಹುದ್ದೆಗಳಿಗೂ ಉತ್ತಮ ಬೇಡಿಕೆ ಕಂಡುಬಂದಿದೆ. ವರ್ಷದಿಂದ ವರ್ಷಕ್ಕೆ ನೋಡಿದರೆ ಐಟಿ ವಲಯದಲ್ಲಿ ಒಟ್ಟಾರೆ ನೇಮಕಾತಿಯು 2023ರ ಜನವರಿಯ ಉಚ್ಛ್ರಾಯ ಸಮಯಕ್ಕಿಂತ ಶೇ.19ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಜನವರಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ನೇಮಕಾತಿಗಳು ಶೇ.7ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿವೆ. ಈ ವಲಯದಲ್ಲಿ ಆಡಳಿತಾತ್ಮಕ ಹುದ್ದೆಗಳಿಗೆ ಬೇಡಿಕೆ ಗರಿಷ್ಠ ಹೆಚ್ಚಳವಾಗಿದೆ. ಎಫ್ಎಂಸಿಜಿಯಲ್ಲಿ ಹೊಸ ಉದ್ಯೋಗಾವಕಾಶಗಳು 2023ರ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ ಶೇ.5ರಷ್ಟು ಹೆಚ್ಚಾಗಿವೆ.
ಬಿಪಿಒ ಮತ್ತು ಇನ್ಶೂರೆನ್ಸ್ ವಲಯಗಳಲ್ಲಿನ ನೇಮಕಾತಿಗಳು ಕ್ರಮವಾಗಿ ಶೇ.16 ಮತ್ತು ಶೇ.8ರಷ್ಟು ಇಳಿಕೆಯಾಗಿವೆ. ಇದಲ್ಲದೆ, ಶಿಕ್ಷಣ ಮತ್ತು ರಿಟೇಲ್ ಕ್ಷೇತ್ರಗಳು ವರ್ಷದಿಂದ ವರ್ಷಕ್ಕೆ ತಲಾ ಶೇ.7ರಷ್ಟು ಇಳಿಕೆಯನ್ನು ದಾಖಲಿಸಿವೆ.
ಇದನ್ನೂ ಓದಿ: ಆರ್ಬಿಐ ಎಂಪಿಸಿ ಸಭೆ ಫೆ.8ಕ್ಕೆ: ಬಡ್ಡಿದರ ಯಥಾಸ್ಥಿತಿ ನಿರೀಕ್ಷೆ