ನವದೆಹಲಿ: 2024ರ ಹೊಸ ವರ್ಷ ಆರಂಭವು ಟೆಕ್ಕಿಗಳಿಗೆ ಶುಭಾರಂಭವಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಈ ವರ್ಷದ ಮೊದಲ ತಿಂಗಳಿನಲ್ಲೇ 122 ಟೆಕ್ ಸಂಸ್ಥೆಗಳು ಮತ್ತು ಸ್ಟಾರ್ಟ್ಅಪ್ಗಳು 30 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದು, ಈ ಉದ್ಯೋಗ ವಜಾದ ಪರ್ವ ಮುಂದುವರೆಯುವ ಸಾಧ್ಯತೆ ಇದೆ.
Layoffs.fyi ಎಂಬ ಸಂಸ್ಥೆ ನೀಡುವ ಉದ್ಯೋಗ ವಜಾದ ದತ್ತಾಂಶದ ಪ್ರಕಾರ, 122 ಟೆಕ್ ಕಂಪನಿಗಳು ಜನವರಿ ಆರಂಭದಿಂದ ಫೆಬ್ರವರಿ 3ರ ವರೆಗೆ 31,751 ಉದ್ಯೋಗಿಗಳಿಗೆ ಬಾಗಿಲು ಮುಚ್ಚಿದೆ. ಸ್ಟಾರ್ಟ್ಅಪ್ಗಳು ಸೇರಿದಂತೆ ಜಗತ್ತಿನಾದ್ಯಂತ ವಿವಿಧ ಟೆಕ್ ಕಂಪನಿಗಳು 2022 ಮತ್ತು 2023ರಲ್ಲಿ 4,25,000 ಉದ್ಯೋಗಿಗಳನ್ನು ವಜಾ ಮಾಡಿವೆ. ಭಾರತದಲ್ಲಿ 36 ಸಾವಿರ ಉದ್ಯೋಗಿಗಳು ಇದೇ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದಾರೆ.
ವಿಡಿಯೋ ಕಮ್ಯೂನಿಕೇಷನ್ ಫ್ಲಾಟ್ಫಾರ್ಮ್ ಜೂಮ್ ಈ ವರ್ಷ 150 ಉದ್ಯೋಗಿಗಳು ಅಥವಾ ತಮ್ಮ ಕಂಪನಿಯ ಉದ್ಯೋಗಿಗಳಲ್ಲಿ ಶೇ 2ರಷ್ಟನ್ನು ಕಡಿತ ಮಾಡಿದೆ. ಜೊತೆಗೆ ಜೂಮ್, ಕ್ಲೌಡ್ ಸಾಫ್ಟ್ವೇರ್ ಮಾರಾಟಗಾರ ಒಕ್ಟಾ ಕೂಡ 400 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಯೋಜನೆ ನಡೆಸುವ ಮೂಲಕ ಶೇ7ರಷ್ಟು ಉದ್ಯೋಗಿಗಳ ಕಡಿತ ಮಾಡಲಿದೆ. ಆನ್ಲೈನ್ ಪೇಮೆಂಟ್ ಸಂಸ್ಥೆ ಪೇಪಲ್ ಕೂಡ ಕಳೆದ ತಿಂಗಳು ತಮ್ಮ ಒಟ್ಟಾರೆ ಉದ್ಯೋಗಿಗಳಲ್ಲಿ ಶೇ 9ರಷ್ಟು ಅಂದರೆ 2,500 ಉದ್ಯೋಗಿಗಳನ್ನು ಕಡಿತ ಮಾಡಿದೆ.
ಗ್ರಾಹಕರ ರೋಬೋಟ್ ತಯಾರಿಸುವ ಐರೋಬೋಟ್, ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ 31ರಷ್ಟು ಅಂದರೆ 350 ನೌಕರರ ವಜಾ ಮಾಡಿದೆ. ಈ ಸಂಸ್ಥೆಯ ಸಂಸ್ಥಾಪೊಕ ಮತ್ತು ಸಿಇಒ ಕೊಲಿನ್ ಏಂಜಲ್ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಆನ್ಲೈನ್ ಫುಡ್ ಡೆಲಿವರಿ ಫ್ಲಾಟ್ಫಾರಂ ಸ್ವಿಗ್ಗಿ ಕೂಡ ತನ್ನ ಉದ್ಯೋಗಿಗಳಲ್ಲಿ ಶೇ 7ರಷ್ಟು ಕಡಿತ ಅಂದರೆ, 350-400 ಉದ್ಯೋಗಿಗಳ ವಜಾ ಮಾಡಿದೆ. ಇ ಕಾಮರ್ಸ್ ಫ್ಲಾಟ್ಫಾರಂ ಇಬೇ ಕೂಡ 1ಸಾವಿರ ಉದ್ಯೋಗಿಗಳ ವಜಾ ಮಾಡಿದೆ.
ಗೂಗಲ್ನ ಮಾಲೀಕತ್ವದ ಯೂಟ್ಯೂಬ್ ಕೂಡ ಕ್ರಿಯೇಟರ್ ಮ್ಯಾನೇಜ್ಮೆಂಟ್ ಮತ್ತು ಆಪರೇಷನ್ ತಂಡದಲ್ಲಿ 100 ಉದ್ಯೋಗಿಗಳನ್ನು ಕಡಿತ ಮಾಡಿದೆ. ಇದಕ್ಕೂ ಮುನ್ನ 1ಸಾವಿರ ಉದ್ಯೋಗಿಗಳನ್ನು ಸಂಸ್ಥೆ ವಜಾ ಮಾಡಿತ್ತು.
ಗೂಗಲ್ ಸಿಇಒ ಸುಂದರ್ ಪಿಚ್ಚೈ ಈಗಾಗಲೇ ಅನೇಕ ಉದ್ಯೋಗಿಗಳ ವಜಾಗೊಳಿಸುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಜಾಗತಿಕ ದತ್ತಾಂಶ ನಿರ್ವಹಣಾ ಸಲ್ಯೂಷನ್ ವೀಯಾಮ್ ಸಾಫ್ಟ್ವೇರ್ 300 ಉದ್ಯೋಗಿಗಳನ್ನು ವಜಾ ಮಾಡಿದರೆ, ಪಾಲಿಗಾನ್ ಲ್ಯಾಬ್ಸ್ ತನ್ನ ಉದ್ಯೋಗಿಗಳ ಶೇ 19 ರಷ್ಟು ಅಥವಾ 60 ಉದ್ಯೋಗಿಗಳನ್ನು ವಜಾಗೊಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: 20ರ ಹರೆಯ: ಜುಕರ್ಬರ್ಗ್ಗೆ 'ಲವ್ ಯೂ ಡ್ಯಾಡ್' ಎಂದ ಫೇಸ್ಬುಕ್