ಮಂಗಳೂರು: ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಜೀವನದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ಎಲ್ಲರೂ ಖುಷಿ ಪಡುತ್ತಾರೆ. ಹಾಗೆಯೇ ಇಂದು ನಡೆಯುತ್ತಿರುವ ಲೋಕಸಭಾ ಚುನಾವಣೆ ನಿಮಿತ್ತ ಹಲವು ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ಸಂತಸ ಹಂಚಿಕೊಂಡರು.
ಮೊದಲ ಬಾರಿ ಮತದಾನ ಮಾಡಿ ಮಾತನಾಡಿದ ಮಂಗಳೂರಿನ ವಂದನಾ ರಸ್ಕಿನ್, ಬಹಳ ದಿನಗಳಿಂದ ನಾನು ವೋಟ್ ಮಾಡಲು ಕಾಯುತ್ತಿದ್ದೆ. ಇದೀಗ ಸಮಯ ಕೂಡಿಬಂದಿತು. ಮೊದಲ ಬಾರಿ ಮತದಾನ ಮಾಡಿದ್ದು ಹಾಗೆಯೇ ಮತದಾನದ ಪ್ರಕ್ರಿಯೆ ಕಂಡು ಖುಷಿ ಆಯಿತು. ಆರಂಭದಲ್ಲಿ ನನ್ನ ಹೆಸರು ಮತದಾರ ಪಟ್ಟಿಯಲ್ಲಿ ಕಾಣಿಸಲಿಲ್ಲ. ಆ ಬಳಿಕ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಕೂಡ ಖುಷಿ ತಂದಿದೆ ಎಂದರು.
ನಗರದ ಕೃಪಾ ರಸ್ಕಿನ್ ಮಾತನಾಡಿ, ನಾನು ಎರಡನೇ ಬಾರಿ ಮತ ಚಲಾಯಿಸುತ್ತಿದ್ದೇನೆ. ನಾನು ತಮಿಳುನಾಡಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿದ್ದು, ಮತ ಚಲಾಯಿಸಲೆಂದೇ ತಮಿಳುನಾಡಿನಿಂದ ಮಂಗಳೂರಿಗೆ ಬಂದಿರುವೆ. ಮತದಾನ ಮಾಡಿದ್ದು ಖುಷಿ ತರಿಸಿತು ಎಂದು ತಿಳಿಸಿದರು.
ನಗರದ ಮತ್ತೊಬ್ಬ ಯುವ ಮತದಾರೆ ಐಶ್ವರ್ಯ ಮಾತನಾಡಿ, ಕಾರಣಾಂತರಗಳಿಂದ ನಾನು ಮೊದಲ ಬಾರಿಗೆ ಮತ ಚಲಾಯಿಸಬೇಕಾದಾಗ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದೆ. ಈ ಬಾರಿ ಮೊದಲ ಬಾರಿಗೆ ಮತ ಚಲಾಯಿಸಿದ್ದೇನೆ. ತುಂಬಾ ಖುಷಿಯಾಗಿದೆ ಎಂದರು.
ಮಂಗಳೂರಿನ ಅನನ್ಯ ಮಾತನಾಡಿ, ತುಂಬಾ ಖುಷಿ ಆಯಿತು. ಫಸ್ಟ್ ಟೈಮ್ ಮತ ಚಲಾಯಿಸಲು ಆಸಕ್ತಳಾಗಿದ್ದೆ. ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಖುಷಿ ತಂದಿದೆ ಎಂದು ತಮ್ಮ ಸಂತಸ ಹಂಚಿಕೊಂಡರು.