ರಾಯಚೂರು : ಕುರಿ ಕಾಯಲು ತೆರಳಿದ್ದ ಯುವತಿಯೊಬ್ಬಳು ಕೆರೆಗೆ ನೀರು ಕುಡಿಯಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ಮಾನವಿ ತಾಲೂಕಿನ ಪೆಚಲಬಂಡ ಕ್ಯಾಂಪ್ನಲ್ಲಿ ಸಂಭವಿಸಿದೆ. ಲಕ್ಷ್ಮಿ (19) ಮೃತ ಯುವತಿ ಎಂದು ಗುರುತಿಸಲಾಗಿದೆ.
ಇಬ್ಬರು ಅಕ್ಕ-ತಂಗಿಯರಿಬ್ಬರು ಕುರಿ ಕಾಯಲು ಕ್ಯಾಂಪ್ ಹೊರ ವಲಯಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅಕ್ಕ ಲಕ್ಷ್ಮಿಗೆ ಬಾಯಾರಿಕೆಯಾಗಿದ್ದು, ಪಕ್ಕದ ಜಮೀನೊಂದರಲ್ಲಿದ್ದ ಖಾಸಗಿ ಕೆರೆಯನ್ನು ಕಂಡು ಅಲ್ಲಿಗೆ ಯುವತಿ ನೀರು ಕುಡಿಯುವುದಕ್ಕೆ ಮುಂದಾಗಿದ್ದಳು. ಆದರೆ ಕಾಲು ಜಾರಿ ಬಿದ್ದು, ಕೆರೆಯಲ್ಲಿ ಮುಳುಗಿದ್ದಳು. ಅಲ್ಲಿಯೇ ಇದ್ದ ಸ್ಥಳೀಯರು ಯುವತಿಯನ್ನು ಮೇಲಕ್ಕೆ ಎತ್ತಿದ್ದು, ಆಸ್ಪತ್ರೆಗೆ ಕರೆ ತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ಮಾನವಿ ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಾನವಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ವಿಷಯ ತಿಳಿದು ಸ್ಥಳಕ್ಕೆ ಮಾನವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಯುವತಿ ವಿವಾಹ ನಿಶ್ಚಯವಾಗಿದ್ದು, ಮುಂದಿನ ವಾರ ಹಸೆಮಣೆ ಏರಲು ಸಜ್ಜಾಗಿದ್ದಳು. ಆದರೆ ಹಸೆಮಣೆ ಏರುವ ಮುನ್ನವೇ ನೀರುಪಾಲು ಆಗಿದ್ದಾಳೆ. ಮೃತಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ಬಂಟ್ವಾಳ: ಸಂಚರಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಬಿದ್ದು ಯುವತಿ ಸಾವು!