ರಾಯಚೂರು: ಮಹಿಳಾ ಸ್ವಾಧಾರ ಕೇಂದ್ರದಲ್ಲಿದ್ದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ನಗರದಲ್ಲಿ ದೇವರ ಕಾಲೋನಿಯಲ್ಲಿ ನಡೆದಿದೆ. ಅನುರಾಧ (19) ಆತ್ಮಹತ್ಯೆಗೆ ಶರಣಾದ ಯುವತಿ. ಯುವತಿ ಶನಿವಾರ ರಾತ್ರಿ ಸ್ವಾಧಾರ ಕೇಂದ್ರದಲ್ಲಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಳು, ಕೂಡಲೇ ಯುವತಿಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾಳೆ.
ಯುವಕನೊಬ್ಬನನ್ನು ಅನುರಾಧ ಪ್ರೀತಿಸುತ್ತಿದ್ದಳು. ಪ್ರೇಮಿಗಳಿಬ್ಬರು ಮದುವೆ ವಿಚಾರವಾಗಿ ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮದುವೆಗೆ ಯುವತಿ ಮನೆಯವರು ಒಪ್ಪಿಗೆ ನೀಡದ ಹಿನ್ನೆಲೆ ಪೊಲೀಸರು ಯುವತಿಯನ್ನು ಮಹಿಳಾ ಸ್ವಾಧಾರ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು ಎಂದು ತಿಳಿದುಬಂದಿದೆ.
ಯುವಕ ಸಹ ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿ ಕುಟುಂಬದವರು ಆರೋಪಿಸಿದ್ದಾರೆ. ನಗರದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ವಾಧಾರ ಕೇಂದ್ರದ ಅಧ್ಯಕ್ಷೆ ಜಿ.ಎಸ್. ಕಲಾವತಿ ಮಾತನಾಡಿ, "ಪ್ರೇಮದ ವಿಚಾರವಾಗಿ ಪೋಷಕರ ಮನೆಗೆ ಹೋಗಲ್ಲ ಎಂದ ಯುವತಿಯನ್ನು ಜೂ.20ರಂದು ಮಾರ್ಕೆಟ್ ಯಾರ್ಡ್ ಪೊಲೀಸರು ಸ್ವಾಧಾರ ಕೇಂದ್ರಕ್ಕೆ ತಂದು ಬಿಟ್ಟು ಹೋಗಿದ್ದರು. ಅಂದು ರಾತ್ರಿ 8:30 ರಂದು ಯುವತಿ ತಂದೆ ಹಾಗೂ ಅವರ ಕಡೆಯವರು ಬಂದು ಇವತ್ತು ಒಂದು ದಿನ ಮಗಳನ್ನು ಇಲ್ಲೇ ಇಟ್ಟುಕೊಳ್ಳಿ ಎಂದು ನನ್ನ ಬಳಿ ಮನವಿ ಮಾಡಿದರು. ನಾನು ಯುವತಿಗೆ ಇರಲು ಇಷ್ಟವಿಲ್ಲ, ನಾವು ಇಟ್ಟುಕೊಳ್ಳುವುದಿಲ್ಲ ಎಂದೆ. ನಂತರ ಯುವತಿಯ ತಂದೆ ಆಕೆಯನ್ನು ಸ್ವಲ್ಪ ದೂರ ಕರೆದುಕೊಂಡು ಹೋದರು. ಮತ್ತೆ ಕರೆದುಕೊಂಡು ಬಂದು ರೂಮಿಗೆ ತಂದು ಬಿಟ್ಟು ಲಾಕ್ ಮಾಡಿದರು. ನಂತರ ನಾನು 10 ನಿಮಿಷ ಯುವತಿಯೊಂದಿಗೆ ಮಾತನಾಡಿ ಸಮಾಧಾನ ಮಾಡಿದ್ದೆ. ಬಳಿಕ ಯುವತಿ ಕಟ್ಟಡದಿಂದ ಜಿಗಿದಳು. ತಕ್ಷಣ ಆಕೆಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು" ಎಂದರು.
ಇದನ್ನೂ ಓದಿ: ಮಂಡ್ಯ: ಕೌಟುಂಬಿಕ ಕಲಹ, 80 ವರ್ಷದ ದೊಡ್ಡಮ್ಮನನ್ನೇ ಕೊಂದ! - Elderly Woman Killed In Mandya