ಕಾರವಾರ: ಜೋಯಿಡಾ ತಾಲ್ಲೂಕಿನ ರಾಮನಗರ ಪೊಲೀಸ್ ಠಾಣೆಯ ಪಿಎಸ್ಐ ಅವರಿಂದ ದೌರ್ಜನ್ಯವಾಗಿದೆ ಎಂದು ಆರೋಪಿಸಿ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಗಾಯಗೊಂಡಿದ್ದ ಯುವಕ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾನೆ.
ರಾಮನಗರದ ಹನುಮಾನ್ ಗಲ್ಲಿಯ ನಿವಾಸಿಯಾಗಿರುವ ಭಾಸ್ಕರ್ ಬೊಂಡಲ್ಕರ್ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಯುವಕ.
ಈತ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಜೂನ್ 13ರಂದು ಸಂಜೆ ರಾಮನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದನು. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗಂಭೀರ ಗಾಯಗೊಂಡಿದ್ದ ಆತನನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾನೆ.
ಪ್ರಕರಣದ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್ ಮಾಧ್ಯಮದ ಜೊತೆಗೆ ಮಾತನಾಡಿದ್ದು, "ಜೂನ್ 13 ರಂದು ಸಂಜೆ 7 ಗಂಟೆ ಸುಮಾರಿಗೆ ಭಾಸ್ಕರ್ ಎನ್ನುವ ವ್ಯಕ್ತಿ ಮದ್ಯಪಾನ ಮಾಡಿ, ಬೈಕ್ ಚಲಾಯಿಸಿಕೊಂಡು, ರಾಮನಗರ ವ್ಯಾಪ್ತಿಯ ಪೊಲೀಸ್ ಠಾಣೆಗೆ ಬಂದಿದ್ದಾನೆ. ಬಂದವನು ಗಲಾಟೆ ಮಾಡಿದ್ದಾನೆ. ಆಗ ಅಲ್ಲಿದ್ದ ಎಸ್ಐ ಹಾಗೂ ಇತರ ಸಿಬ್ಬಂದಿ, ಆತನನ್ನು ವಿಚಾರಿಸಿದ್ದು, ಆತನ ಮಾವ ಗಣಪತಿ ಗೌಡಯ್ಯ ಅವರ ಮೇಲೆ, ಪಕ್ಕದ ಮನೆಯವರ ಜೊತೆಗೆ ಜಗಳವಾಡಿದ್ದಕ್ಕಾಗಿ ದೂರು ಇದೆ. ಹಾಗಾಗಿ ಶಾಂತಿ ಭಂಗ ಮಾಡಬಾರದು ಎಂದು ತಹಶೀಲ್ದಾರ್ ಕಚೇರಿಯಿಂದ ಪಿಆರ್ ಆ್ಯಕ್ಷನ್ ತೆಗೆದುಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಈ ಘಟನೆಯ ಹಿಂದಿನ ದಿನ ಅವರನ್ನು ತಹಶೀಲ್ದಾರ್ ಕಚೇರಿಗೆ ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆಗೆ ಹೋಗಿ ಬಂದ ಮಾವ, ಅಳಿಯ ಭಾಸ್ಕರ್ಗೆ, ತಹಶೀಲ್ದಾರ್ ಕಚೇರಿಯಿಂದ ನೋಟಿಸ್ ಬಂದಿದ್ದ ವಿಷಯ ತಿಳಿಸಿದ್ದಾರೆ.
ಅದೇ ವಿಷಯವನ್ನು ತೆಗೆದುಕೊಂಡು, ಭಾಸ್ಕರ್ ಪೊಲೀಸ್ ಠಾಣೆಗೆ ಬಂದು ತನ್ನ ಮಾವನ ಮೇಲೆ ಯಾಕೆ ಕೇಸ್ ಹಾಕಿದ್ದೀರ ಎಂದು ಗಲಾಟೆ ಮಾಡಿದ್ದಾನೆ. ಆಗ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಈ ಕ್ರಮ ತೆಗದುಕೊಂಡಿದ್ದಾರೆಯೇ ವಿನಃ ಬೇರೆ ಏನೂ ಇಲ್ಲ. ತಹಶೀಲ್ದಾರ್ ಅವರಿಗೆ ನಿಮ್ಮ ಮಾವ ಮುಚ್ಚಳಿಕೆ ಬರೆದುಕೊಟ್ಟರೆ, ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ. ಆದರೂ ಆತ ಪೊಲೀಸರ ಜೊತೆ ಜಗಳ ಮುಂದುವರಿಸಿದ್ದ. ಹಾಗಾಗಿ ಪೊಲೀಸರು ಆತನನ್ನು ಪರೀಕ್ಷಿಸಿದಾಗ, ಮದ್ಯಪಾನ ಮಾಡಿದ್ದು ತಿಳಿದು ಬಂದಿದೆ. ಬೈಕ್ ಅನ್ನು ವಶಕ್ಕೆ ಪಡೆದು, ಯಾರಾದರೂ ಸ್ನೇಹಿತರು, ಇಲ್ಲವೇ ಮನೆಯವರು ಬಂದರೆ ವಾಹನ ನೀಡುವುದಾಗಿ ಹೇಳಿದ್ದಾರೆ. ಆತ ಠಾಣೆಯಲ್ಲೇ ಕುಳಿತು ಸ್ನೇಹಿತರು ಹಾಗೂ ಮನೆಯವರಿಗೆ ಫೋನ್ ಮಾಡಿದ್ದಾನೆ. ಆದರೆ ಯಾರೂ ಬಂದಿಲ್ಲ. ಆ ಸಂದರ್ಭದಲ್ಲಿ ಅರ್ಧ, ಮುಕ್ಕಾಲು ಗಂಟೆ ಸ್ಟೇಷನ್ನಲ್ಲಿ ಕುಳಿತಿದ್ದು, ನಂತರ ಹೊರಗಡೆ ಹೋಗಿದ್ದಾನೆ. 20 ನಿಮಿಷ ಕಳೆದು ಮತ್ತೆ ಠಾಣೆಗೆ ಬಂದವ ಠಾಣೆಯ ಮುಂಭಾಗದಲ್ಲಿದ್ದ ಮುಖ್ಯರಸ್ತೆಯಲ್ಲಿ ನಿಂತು ಕೈಯಲ್ಲಿ ಹಿಡಿದುಕೊಂಡಿದ್ದ ಪೆಟ್ರೋಲ್ ಬಾಟಲಿಯನ್ನು ಮೈಮೇಲೆ ಸುರಿದು, ಬೆಂಕಿಪೆಟ್ಟಿಗೆಯಿಂದ ಕಡ್ಡಿ ಗೀರಿಕೊಂಡು ಹಚ್ಚಿಕೊಂಡಿದ್ದಾನೆ. ತಕ್ಷಣ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಆತನ ಮೇಲಿದ್ದ ಬೆಂಕಿಯನ್ನು ಆರಿಸಿ, ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ." ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಚಾಮರಾಜನಗರ: ನಾಪತ್ತೆಯಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಬಿಳಿಗಿರಿರಂಗನ ಬೆಟ್ಟದಲ್ಲಿ ಆತ್ಮಹತ್ಯೆ - BUSINESS MAN SUICIDE