ಬೆಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಯುವಕನೊಬ್ಬ ಪ್ರೀತಿಯ ನಾಟಕವಾಡಿ, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಛತ್ತೀಸ್ಗಢ ಮೂಲದ 30 ವರ್ಷದ ಯುವತಿ ನೀಡಿರುವ ದೂರಿನ ಅನ್ವಯ ಕೇರಳ ಮೂಲದ ಬಿಲಾಲ್ ರಫೀಕ್, ಆತನ ಪೋಷಕರು ಹಾಗೂ ಸಹೋದರಿಯ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯ ದೂರಿನಲ್ಲಿ ಏನಿದೆ?: ಬೆಂಗಳೂರಿನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯು, ''ತನಗೆ 2021ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಕೇರಳ ಮೂಲದ ಬಿಲಾಲ್ ರಫೀಕ್ ಎಂಬಾತನ ಪರಿಚಯವಾಗಿತ್ತು. ಫೋನ್ ಸಂಭಾಷಣೆಯ ಮೂಲಕ ಮಾತನಾಡುತ್ತಿದ್ದ ಇಬ್ಬರೂ ನಂತರ ಪರಸ್ಪರ ಪ್ರೀತಿಸಲಾರಂಭಿಸಿದ್ದೆವು. ಈ ಸಂದರ್ಭದಲ್ಲಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ಬಿಲಾಲ್ ರಫೀಕ್ 2 ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳಸಿದ್ದ. ಎರಡೂ ಬಾರಿಯೂ ತಾನು ಗರ್ಭಿಣಿಯಾದಾಗ ಆತನೇ ಪುಸಲಾಯಿಸಿ ಗರ್ಭಪಾತ ಮಾಡಿಸಿದ್ದ'' ಎಂದು ದೂರಿನಲ್ಲಿ ತಿಳಿಸಿದ್ದಾರೆ.
''2024ರಲ್ಲಿ ಆರೋಪಿಯಿಂದ 3ನೇ ಬಾರಿ ಗರ್ಭಿಣಿಯಾದಾಗ ತನ್ನ ಒತ್ತಾಯದ ಕಾರಣಕ್ಕೆ ಆರೋಪಿ ಮದುವೆಗೆ ಸಮ್ಮತಿಸಿದ್ದ. ಎರಡೂ ಕುಟುಂಬಸ್ಥರು ಮದುವೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದರು. ಆರೋಪಿಯ ಪೋಷಕರು ತನ್ನಿಂದ ಹಣ, ಮತ್ತಿತರ ವಸ್ತುಗಳನ್ನೂ ಪಡೆದಿದ್ದರು. ನಂತರದಲ್ಲಿ ಆರೋಪಿಯ ಪೋಷಕರು ಹಾಗೂ ಸಹೋದರಿ ಕರೆ ಮಾಡಿ, 'ತಾವು ಮದುವೆಗೆ ಒಪ್ಪುವುದಿಲ್ಲ' ಎನ್ನುತ್ತಾ ತನಗೆ ಅಸಭ್ಯವಾಗಿ ನಿಂದಿಸಿ, ಜಾತಿನಿಂದನೆ ಮಾಡಿದ್ದಾರೆ. ಹಾಗೂ ಮದುವೆಗೆ ಯತ್ನಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ'' ಎಂದು ನೊಂದ ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತ ಯುವತಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದಪುರ ಠಾಣೆ ಪೊಲೀಸರು, ಸದ್ಯ ಆರೋಪಿ ಬಿಲಾಲ್ ರಫೀಕ್‌ನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಾತಿನಿಂದನೆ ಆರೋಪ: ಕಿರುತೆರೆ ಹಾಸ್ಯ ನಟ ಕಾರ್ತಿಕ್ ವಿರುದ್ಧ ಎಫ್ಐಆರ್