ಮೈಸೂರು: ಇತಿಹಾಸ ಪ್ರಸಿದ್ಧ ಮೈಸೂರು ಅರಮನೆಯಲ್ಲಿಂದು ರಾಜವಂಶಸ್ಥರ ಆಯುಧಗಳಿಗೆ ಸಂಪ್ರದಾಯದಂತೆ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 12.20ರಿಂದ 12.40ರ ಶುಭ ಲಗ್ನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಪೂರ್ವಜರು ಬಳಸುತ್ತಿದ್ದ ಆಯುಧಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆ ಹಾಗೂ ಪಲ್ಲಕ್ಕಿಯನ್ನು ಪೂಜಿಸಿದರು.
ಇದಕ್ಕೂ ಮೊದಲು ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ಸ್ವಚ್ಚಗೊಳಿಸಲಾಯಿತು. ಬಳಿಕ ರಾಜಪರಂಪರೆಯಂತೆ ಪಲ್ಲಕ್ಕಿಯಲ್ಲಿ ಆಯುಧಗಳನ್ನಿಟ್ಟು ಪಟ್ಟದ ಆನೆ, ಪಟ್ಟದ ಹಸುವಿನೊಂದಿಗೆ ಮಂಗಳವಾದ್ಯಗಳ ಮೂಲಕ ಅರಮನೆಯ ಕಲ್ಯಾಣ ಮಂಟಪಕ್ಕೆ ತೆಗೆದುಕೊಂಡು ಬರಲಾಯಿತು.
ಯದುವೀರ್ ಇಂದು ರಾತ್ರಿ ಖಾಸಗಿ ದರ್ಬಾರ್ ನಡೆಸಿ, ನಾಳೆ ವಿಜಯದಶಮಿ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಆಯುಧ ಪೂಜೆ ದಿನವೇ ಯದುವಂಶಕ್ಕೆ ಸಿಹಿ ಸುದ್ದಿ: ಯದುವೀರ್ - ತ್ರಿಷಿಕಾ ದಂಪತಿಗೆ 2ನೇ ಮಗು ಜನನ
ದಸರಾ ಗಜಪಡೆಗೆ ಪೂಜೆ: ಆಯುಧ ಪೂಜೆ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಅಭಿಮನ್ಯು, ಪ್ರಶಾಂತ, ಗೋಪಿ, ಸುಗ್ರೀವ, ರೋಹಿತ್, ಧನಂಜಯ್, ಭೀಮ, ಮಹೇಂದ್ರ, ವಿಜಯ, ಏಕಲವ್ಯ, ವರಲಕ್ಷ್ಮಿ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪುರೋಹಿತ ಪ್ರಲ್ಹಾದ್ ಜೋಶಿ ಅವರ ನೇತೃತ್ವದಲ್ಲಿ ಪೂಜೆ ಪುನರಸ್ಕಾರಗಳು ನೆರವೇರಿದವು. ಆನೆಗಳ ಹಣೆ, ಸೊಂಡಿಲು ಹಾಗೂ ಕಾಲಿಗೆ ಕುಂಕುಮ ಇಟ್ಟು, ಹಾರಗಳನ್ನು ಹಾಕಿ ಅಧಿಕಾರಿಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು.
ಮೈಸೂರು ವಲಯ ಅರಣ್ಯಾಧಿಕಾರಿ ಹೀರೆಲಾಲ್ ಡಿಸಿಎಫ್ ವನ್ಯಜೀವಿ ವಿಭಾಗ ಡಾ.ಐ.ಎ.ಪ್ರಭುಗೌಡ ಮಾತನಾಡಿ, ಸಾಂಪ್ರದಾಯಿಕವಾಗಿ ಆಯುಧ ಪೂಜೆ ಮಾಡಲಾಗಿದೆ. ನಾಳೆ ನಡೆಯುವ ಜಂಬೂಸವಾರಿ ಆನೆಗಳು ಸಿದ್ಧವಾಗಿವೆ. ಅರಮನೆ ಆಯುಧ ಪೂಜೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಂಜನ್ ನನ್ನು ಪಟ್ಟದ ಆನೆಯಾಗಿ, ಹಿರಣ್ಯ, ಲಕ್ಷ್ಮಿ ಆನೆಗಳನ್ನು ಪೂಜೆಗೆ ಬಳಸಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.