ಮೈಸೂರು: ಸಂವಿಧಾನ ಜಾರಿಗೊಂಡ ಬಳಿಕ ಮಹಾರಾಜರೆಂಬುದು ಇಲ್ಲ. ಹೀಗಾಗಿ ಮೈಸೂರು - ಕೊಡಗು ಲೋಕಸಭಾ ಅಭ್ಯರ್ಥಿಯಾಗಿ ಯದುವೀರ್ ಅವರು ಪ್ರಜಾಪ್ರತಿನಿಧಿಯಾಗಲು ಬಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ವಿವಿಧೆಡೆ ಪ್ರಚಾರ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಜರ ಪದದಲ್ಲಿ ಹುಳುಕು ಹುಡುಕುವುದು ತಪ್ಪು. ಯದುವೀರ್ ಬಿಜೆಪಿ ಅಭ್ಯರ್ಥಿ, ನಾನು ಕೂಡಾ ಹೇಳಿಕೆ ಕೊಡುವಾಗ ಅವರು ಪ್ರಜಾ ಪ್ರತಿನಿಧಿಯಾಗಿರಬೇಕು ಅಂತಾ ಅವತ್ತೇ ನಾನು ಹೇಳಿದ್ದೆ. ಯದುವೀರ್ ಪ್ರಜಾ ಪ್ರತಿನಿಧಿಯಾಗಲು ಬಂದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸಿಎಂ ಹೇಳಿಕೆ ಹುಳುಕು ಅನ್ನಿಸುತ್ತಿಲ್ಲ. ಸಿಎಂ ಹೇಳಿರುವುದರಲ್ಲಿ ತಪ್ಪಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಅವರನ್ನ ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ನನಗೂ ಅವರಿಗೂ ಬಹಳಷ್ಟು ವಿರೋಧಗಳು ಇದೆ. ಮೈಸೂರಿನ ಜನ ಯದುವೀರ್ ಅವರನ್ನ ಮಹಾರಾಜ ಅಂತ ಕರೆಯುತ್ತೀರಾ? ಅಥವಾ ಬಿಜೆಪಿ ಅಭ್ಯರ್ಥಿ ಅಂಥ ಕರೆಯುತ್ತೀರಾ?.. ಮಹಾರಾಜರು ಅರಮನೆಗೆ ಸೀಮಿತವಾಗಿರದೇ ಜನಪ್ರತಿನಿಧಿಯಾಗಲು ಬಂದಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ಎಂದು ಕರೆದಿರುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು.
ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ಗಿಂತ ನಾವೇ ಫಾಸ್ಟ್ ಇದ್ದೇವೆ. ನನ್ನ ಕಾಲಾವಧಿಯಲ್ಲಿ ಮಾಡಿದ ಕೆಲಸಗಳ ರಿಪೋರ್ಟ್ ಕಾರ್ಡ್ನ್ನು ಸಿದ್ದಗೊಳಿಸಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕಾಪಿ ಪ್ರಿಂಟ್ ಮಾಡಿ ಹಂಚಿದ ದೇಶದ ಮೊದಲ ಸಂಸದ ನಾನೇ. ಗುತ್ತಿಗೆದಾರರಲ್ಲಿ ಯಾರ ಬಳಿ ಎಂದೂ ಕಮಿಷನ್ ಪಡೆದಿಲ್ಲ ಅಂತ ನಾನು ಎದೆ ತಟ್ಟಿಕೊಂಡು ಹೇಳುತ್ತೇನೆ. ಬೇರೆಯವರು ತೆಗೆದುಕೊಂಡಿದ್ದಾರೆ. ನನ್ನ ಸಾಲಿಗೆ ಈಗ ಶ್ರೀವತ್ಸಣ್ಣ ಸೇರಿದ್ದಾರೆ. ಅವರು ತೆಗೆದುಕೊಳ್ಳಲ್ಲ. ಬೇರೆಯವರೆಲ್ಲಾ ತೆಗೆದುಕೊಂಡಿದ್ದಾರೆ ಎಂದರು.
ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡಿದೆ. ಟಿಪ್ಪು ಅವರ ಹೆಸರಿನಲ್ಲಿದ್ದ ಟ್ರೈನ್ ಹೆಸರನ್ನು ಬದಲಿಸಿ ನಾಲ್ವಡಿ ಒಡೆಯರ ಹೆಸರನ್ನು ಇಡಲು ಹೋರಾಟ ಮಾಡಿದೆ. ಮಹಿಷಾ ದಸರಾ ನಿಲ್ಲಿಸಲು ಹೋರಾಡಿದೆ. ಸಂಘರ್ಷಕ್ಕೆ ನಿಂತೆನೆಂದು ನೆನೆದರು. ಇಂದು ಪಕ್ಷ ತೀರ್ಮಾನ ಮಾಡಿದೆ. ಯದುವೀರ್ಗಿಂತ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿತಲ್ಲ ಎಂಬ ನೋವು ನಿಮಗೆ ಇರಬಹುದು. ಇರಲಿ ನನಗೆ ಪಕ್ಷ ಹತ್ತು ವರ್ಷ ಅವಕಾಶ ಮಾಡಿಕೊಟ್ಟಿದೆ. ಟಿಕೆಟ್ ಸಿಗಲಿಲ್ಲ ಎಂದು ನಾನು ತಲೆ ಕೆಡಿಸಿಕೊಂಡು ಹೋಗಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಯದುವೀರ್ ಅವರನ್ನು ಗೆಲ್ಲಿಸಿಕೊಂಡು ಬರಲು ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ಲಕ್ಷ್ಣಣ್ ವಿರುದ್ಧ ವ್ಯಂಗ್ಯವಾಡಿದ ಸಂಸದ ಪ್ರತಾಪ ಸಿಂಹ, ಕಾಂಗ್ರೆಸ್ನಲ್ಲಿ ಈಗ ಕೇಳಿ ಬರುತ್ತಿರುವ ಹೆಸರು ಫೈನಲ್ ಆದ್ರೆ ಪ್ರಚಾರಕ್ಕೆ ಹೋಗುವುದೇ ಬೇಡ. ಯದುವೀರ್ ಒಳ್ಳೆ ಅಂತರದಿಂದ ಗೆಲ್ಲುತ್ತಾರೆ. ನಾನು ಚುನಾವಣೆಗೆ ನಿಂತಿದ್ದರೆ ಎರಡರಿಂದ ಮೂರು ಲಕ್ಷ ಮತಗಳಿಂದ ಗೆಲ್ಲುತ್ತಿದ್ದೆ. ನನ್ನ ಮುಂದಿನ ಗುರಿ ಯದುವೀರ್ ಗೆಲ್ಲಿಸುವುದು ಎಂದರು.
ಓದಿ: 'ಬಿಜೆಪಿ-ಜೆಡಿಎಸ್ ಮೈತ್ರಿ ಸುಸೂತ್ರವಾಗಿ ನಡೆಯಲಿದೆ, ಗೊಂದಲಗಳು ಸುಖಾಂತ್ಯ ಕಾಣಲಿವೆ'