ಬೆಂಗಳೂರು : ಸಕಾರಣವನ್ನು ದಾಖಲಿಸದೆ ಮತ್ತು ನಿಯಮಗಳನ್ನು ಪಾಲಿಸದೆ ಖಾತೆಗಳಿಗೆ ನಿರ್ಬಂಧ ವಿಧಿಸುವುದು ಸುಪ್ರೀಂಕೋರ್ಟ್‌ನ ಆದೇಶಕ್ಕೆ ವಿರುದ್ಧವಾಗಿದೆ ಎಂದು ಎಕ್ಸ್ ಕಾರ್ಪ್(ಟ್ವಿಟರ್) ಹೈಕೋರ್ಟ್‌ಗೆ ತಿಳಿಸಿದೆ.
ಕೆಲವು ಖಾತೆಗಳನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಕ್ರಮ ಮತ್ತು 50 ಲಕ್ಷ ರೂ.ಗಳ ದಂಡ ವಿಧಿಸಿದ್ದ ಏಕ ಸದಸ್ಯ ನ್ಯಾಯಪೀಠದ ಕ್ರಮವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್(ಟ್ವಿಟ್ಟರ್) ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಎಸ್ ದಿನೇಶ್‌ಕುಮಾರ್ ಮತ್ತು ನ್ಯಾಯಮೂರ್ತಿ ಟಿ. ಜಿ ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಟ್ವಿಟ್ಟರ್ ಪರ ವಕೀಲ ಸಜ್ಜನ್ ಪೂವಯ್ಯ, ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಹಲವು ಮಂದಿ ವಿವಿಧ ಮಾಹಿತಿ ಹಂಚಿಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 69ರ ಅಡಿಯಲ್ಲಿ ಖಾತೆಗಳನ್ನು ಬ್ಲಾಕ್ ಮಾಡುವುದಕ್ಕೆ ಅವಕಾಶವಿದೆ. ಅದನ್ನು ನಾವು ಪ್ರಶ್ನೆ ಮಾಡುತ್ತಿಲ್ಲ. ಆದರೂ, ಅದಕ್ಕೆ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಖಾತೆಗಳ ಬ್ಲಾಕಿಂಗ್ ನಿಯಮ 2009 ರ ಪ್ರಕಾರ, ಗೊತ್ತುಪಡಿಸಿದ ಅಧಿಕಾರಿಯು ಖಾತೆಗಳನ್ನು ಬ್ಲಾಕ್ ಮಾಡುವಂತಿರಬೇಕು. ಜತೆಗೆ, ಸೂಕ್ತ ಕಾರಣವನ್ನು ನೀಡಿ ತೆಗೆದು ಹಾಕಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಶ್ರೇಯಾ ಸಿಂಘಾಲ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವಂತೆ ಯಾವುದೇ ಖಾತೆಗೆ ನಿರ್ಬಂಧ ವಿಧಿಸಬೇಕಾದಲ್ಲಿ ಸೂಕ್ತ ಕಾರಣವನ್ನು ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಆದರೆ, ಟ್ವಿಟ್ಟರ್ ಖಾತೆಗಳಿಗೆ ನಿರ್ಬಂಧ ವಿಧಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದಾರೆ.
ಒಂದು ಸಂದರ್ಭದಲ್ಲಿ 1500 ಖಾತೆಗಳನ್ನು ನಿರ್ಬಂಧಿಸಲು ಸೂಚನೆ ನೀಡಲಾಗಿತ್ತು. ಅದನ್ನು ಟ್ಟಿಟ್ಟರ್ ಪಾಲಿಸಿದೆ. ಇದಾದ ಬಳಿಕ ಕಾರಣ ನೀಡುವಂತೆ ಕೇಳಿದರೂ ಅದರ ಅಗತ್ಯವಿಲ್ಲ ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಆದ್ದರಿಂದ ಈ ಆದೇಶವನ್ನು ರದ್ದು ಮಾಡಬೇಕು ಎಂದು ಪೀಠಕ್ಕೆ ಕೋರಿದರು.
ಅಲ್ಲದೆ, ಸಾರ್ವಜನಿಕರ ನಿರ್ಬಂಧ ಆದೇಶ ಹೊರಡಿಸುವ ಸಂದರ್ಭದಲ್ಲಿ ಸೂಕ್ತ ಕಾರಣವನ್ನು ದಾಖಲಿಸಬೇಕು. ಅದನ್ನು ಪಾಲಿಸದಿದ್ದಲ್ಲಿ ಮಧ್ಯಸ್ಥಿಕೆ ಸಂಸ್ಥೆ (ಟ್ವಿಟ್ಟರ್) ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಕ್ಕೆ ಅವಕಾಶವಿರಲಿದೆ. ಖಾತೆಗಳನ್ನು ರದ್ದು ಮಾಡಿರುವುದಕ್ಕೆ ರಹಸ್ಯ ಕಾರಣವಿದೆ ಎಂದು ಹೇಳಲಾಗಿದೆ. ಅದು ಏನು ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ ಎಂದು ಪೀಠಕ್ಕೆ ಪೂವಯ್ಯ ವಿವರಿಸಿದ್ದಾರೆ.
ಪೂವಯ್ಯ ಅವರ ವಾದಕ್ಕೆ ಪ್ರತಿವಾದ ಮಂಡಿಸಲು ಕೇಂದ್ರ ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದರು. ಈ ಅಂಶ ದಾಖಲಿಸಿಕೊಂಡು ನ್ಯಾಯಪೀಠ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು? : ಖಾತೆದಾರರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 69 ರಡಿಯಲ್ಲಿ ಕೆಂದ್ರ ಸರ್ಕಾರ ಕೆಲವು ಖಾತೆಗಳನ್ನು ರದ್ದುಪಡಿಸಿದೆ ಎಂದು ಟ್ವಿಟ್ಟರ್ ಆರೋಪಿಸಿತ್ತು. ಅಲ್ಲದೆ, 2021 ರ ಫೆಬ್ರವರಿ 2 ರಿಂದ 2022ರ ಫೆಬ್ರವರಿ 28ರ ಅವಧಿಯಲ್ಲಿ ಕೇಂದ್ರ ಸರ್ಕಾರ 1474 ವೈಯಕ್ತಿಕ ಖಾತೆಗಳು ಮತ್ತು 175 ಟ್ವಿಟ್‌ಗಳು ಹಾಗೂ 256 ಯೂಆರ್‌ಎಲ್‌ಗಳು ಹಾಗೂ ಒಂದು ಹ್ಯಾಶ್ ಟ್ಯಾಗ್ಗೆ ನಿರ್ಬಂಧ ವಿಧಿಸಿತ್ತು.
ಆದರೆ, 39 ಯುಆರ್‌ಎಲ್‌ಗಳನ್ನು ರದ್ದು ಪಡಿಸಲಾಗಿತ್ತು. ಈ ನಿರ್ಬಂಧ ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ₹ 50 ಲಕ್ಷ ದಂಡ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಎಕ್ಸ್ ಕಾರ್ಪ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಚಾಲಕ ಪರವಾನಗಿ ಹೊಂದಿಲ್ಲದ ವೇಳೆ ಪಾವತಿ & ವಸೂಲಾತಿ ನೀತಿ ಬಳಸಿ: ಹೈಕೋರ್ಟ್