ಹಾವೇರಿ: ಇಂದು ವಿಶ್ವದೆಲ್ಲೆಡೆ ಪರಿಸರ ದಿನಾಚರಣೆ. ಹಸಿರನ್ನು ವೃದ್ಧಿಸುವುದರ ಜೊತೆಗೆ ಪರಿಸರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಪರಿಸರವಾದಿಗಳು, ಪರಿಸರಪ್ರೇಮಿಗಳನ್ನು ಶ್ಲಾಘಿಸುವ ದಿನ. ಹಾವೇರಿ ಜಿಲ್ಲೆಯಲ್ಲಿ ಇಂತಹ ಹಲವು ಪರಿಸರವಾದಿಗಳು ಪರಿಸರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲೊಬ್ಬರು ಮಾಲತೇಶ್ ಅಂಗೂರು.
ಮಾಲತೇಶ್ ಅಂಗೂರು ಮೂಲತಃ ಪತ್ರಕರ್ತರು. ಆದರೆ ಇವರಲ್ಲಿ ಪರಿಸರಪ್ರೇಮ, ಪರಿಸರವಾದ ಆಳವಾಗಿ ಬೇರೂರಿದೆ. ತಮ್ಮ ಲೇಖನಗಳಲ್ಲಿ, ತಮ್ಮ ಕ್ಯಾಮರಾಗಳಲ್ಲಿ ಪರಿಸರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಅಂಗೂರು ಮಾಡುತ್ತಿದ್ದಾರೆ. ಅದರಲ್ಲೂ ಮಾಲತೇಶ್ ಅಂಗೂರ್‌ಗೆ ಹಾವೇರಿಗೆ ಹೆಸರು ತಂದುಕೊಟ್ಟ ಹೆಗ್ಗೇರಿ ಕೆರೆ ಬಗ್ಗೆ ವಿಶೇಷ ಕಾಳಜಿ. ಸುಮಾರು 900 ಎಕರೆ ವಿಸ್ತೀರ್ಣದ ಹೆಗ್ಗೇರಿಯಲ್ಲಿ ಯಾವುದೇ ಪಕ್ಷಿಗಳು ಅಥವಾ ಪ್ರಾಣಿಗಳೇ ಬರಲಿ, ಅದು ಮೊದಲು ಗೊತ್ತಾಗುವುದು ಮಾಲತೇಶ್ ಅಂಗೂರು ಅವರಿಗೆ. ಪ್ರಾಣಿಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದರೂ ಅವುಗಳ ರಕ್ಷಣೆಗೆ ಮೊದಲು ಧಾವಿಸುವವರು ಕೂಡಾ ಇದೇ ಮಾಲತೇಶ್ ಅಂಗೂರು.
ಇವರ ಕಾಳಜಿಯಿಂದಲೇ ಅರಣ್ಯ ಇಲಾಖೆ, ಕೆರೆಯ ಹತ್ತು ಹಲವೆಡೆ 'ಇಲ್ಲಿಗೆ ಬರುವ ಪ್ರಾಣಿಗಳಿಗೆ ಹಾನಿ ಮಾಡಬಾರದು' ಎಂಬ ಎಚ್ಚರಿಕೆಯ ಫಲಕಗಳನ್ನು ಹಾಕಿದೆ. ಪ್ರತಿನಿತ್ಯ ಕೆರೆಗೆ ಹೋಗುವ ಮಾಲತೇಶ್ ಅಂಗೂರು ಅವರು ಕೆರೆ ಅತಿಕ್ರಮಣಕಾರರಿಗೆ ದುಸ್ವಪ್ನವಾಗಿದ್ದಾರೆ. ಮುಂಜಾನೆ ಕೆರೆಯಿಂದ ಆರಂಭವಾಗುವ ಇವರ ದಿನಚರಿ ಸಂಜೆ ಕೆರೆ ವೀಕ್ಷಣೆಯೊಂದಿಗೆ ಕೊನೆಗೊಳ್ಳುತ್ತದೆ. ಹೆಗ್ಗೇರಿ ಕೆರೆಯನ್ನು ಪಕ್ಷಿಧಾಮ ಮಾಡುವ ಮಹಾದಾಸೆಯೂ ಅಂಗೂರು ಅವರಿಗಿದೆ.
ಇಳಿ ವಯಸ್ಸಿನಲ್ಲೂ ಕ್ಯಾಮರಾ ಹಿಡಿದು ಹೊರಟರೆಂದರೆ ಒಂದು ವಿಶಿಷ್ಟ ಫೋಟೋ ಸೆರೆಯಾಯಿತೆಂದೇ ಲೆಕ್ಕ. ಹೆಗ್ಗೇರಿಗೆ ಬರುವ ವಿದೇಶಿ ಪಕ್ಷಿಗಳ ಜೀವನವನ್ನು ಇವರು ತಮ್ಮ ಲೇಖನದಲ್ಲಿ ಕಟ್ಟಿಕೊಡುತ್ತಾರೆ. ಹೆಗ್ಗೇರಿಗೆ ಬಂದಿರುವ ನೀರುನಾಯಿಗಳನ್ನಂತೂ ಅತಿಥಿಗಳಂತೆಯೇ ನೋಡಿಕೊಳ್ಳುತ್ತಿದ್ದಾರೆ. ಕಿಡಿಗೇಡಿಗಳು ಎರಡು ನೀರುನಾಯಿಗಳನ್ನು ಹೊಡೆದು ಕೊಂದಾಗ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆದು, ಯಾರೂ ಕೆರೆಯ ತಂಟೆಗೆ ಬರದಂತೆ ನೋಡಿಕೊಂಡಿದ್ದಾರೆ.
ಸಾಹಿತಿಯೂ ಆಗಿರುವ ಮಾಲತೇಶ್ ಅಂಗೂರು ಅವರ ಕೃತಿಗಳಲ್ಲಿಯೂ ಪರಿಸರವೇ ಹಾಸುಹೊಕ್ಕಾಗಿದೆ. ಅದರಲ್ಲೂ ಅವರ 'ಕಾಡುಮೇಡು' ಕೃತಿ ಹೆಸರಿಗೆ ತಕ್ಕಂತೆ ಕಾಡಿನ ಜೀವನ, ಪರಿಸರದ ಬಗೆಗಿನ ಕಾಳಜಿ ತೋರಿಸುತ್ತದೆ. ಮಕ್ಕಳಿಗೆ ಪರಿಸರಪ್ರೇಮ ಪಾಠಗಳನ್ನು ಅವರ ಕೃತಿಗಳು ಸಾರುತ್ತವೆ. ರಾಜ್ಯದ ಬಂಡೀಪುರ ಅಭಯಾರಣ್ಯ, ಸಕ್ರೈಬೈಲು ಆನೆ ಬಿಡಾರ, ರಂಗನತಿಟ್ಟು ಪಕ್ಷಿಧಾಮ, ಬಳ್ಳಾರಿಯ ದರೋಜಿ ಕರಡಿಧಾಮ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿರುವ ಅಂಗೂರು, ಅಲ್ಲಿಯ ಪ್ರಾಣಿ-ಪಕ್ಷಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಹಾವೇರಿಯಲ್ಲಿ ಪಕ್ಷಿಗಳ ಬಗ್ಗೆ, ಅವುಗಳ ಹೆಸರು, ದಿನಚರಿ, ಆಹಾರ ಪದ್ಧತಿಗಳ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಮಾಹಿತಿ ನೀಡುವ ಅಂಗೂರು, ಪರಿಸರದಲ್ಲಿ ಪಕ್ಷಿಗಳ ಪಾತ್ರವೆಷ್ಟು ಅಮೂಲ್ಯವಾದದ್ದು ಎಂಬುದನ್ನು ವಿವರಿಸುತ್ತಾರೆ.
ಇದನ್ನೂ ಓದಿ: ವಿಶ್ವ ಪರಿಸರ ದಿನ: ಭೂಮಿ ಕಾಪಾಡಲು ಕೈಗೊಳ್ಳಬೇಕಿದೆ ಪ್ರತಿಯೊಬ್ಬರು ಪಣ - WORLD ENVIRONMENT DAY