ಹುಬ್ಬಳ್ಳಿ : ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಆಮಿಷವೊಡ್ಡುವುದು ಸಾಮಾನ್ಯ. ಅದರಂತೆ ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕಾರ್ಡ್ ಕುಟುಂಬದ ಮಹಿಳೆಯರಿಗೆ 3 ಸಾವಿರ ರೂ. ಜಮಾ ಮಾಡಲಾಗುವುದು ಎಂಬ ವದಂತಿ ಹರಡಿ, ನಗರದ ಅಂಚೆ ಕಚೇರಿಗಳಿಗೆ ಮಹಿಳೆಯರು ಮುಗಿಬಿದ್ದಿದ್ದರು.
ಇಂದು ಬೆಳಗ್ಗೆ 8 ರಿಂದ ನಗರದ ವಿವಿಧ ಅಂಚೆಕಚೇರಿಗಳ ಎದುರು ಮಹಿಳೆಯರು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಸ್ಟೇಷನ್ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ ಗೋಕುಲ್ ರೋಡ್ ಸೇರಿದಂತೆ ಹಲವು ಕಡೆ ರಾತ್ರಿ 8 ಗಂಟೆಯವರೆಗೂ ಮಹಿಳೆಯರೂ ಕ್ಯೂನಲ್ಲಿ ನಿಂತಿದ್ದರು.
ಹಳೇಹುಬ್ಬಳ್ಳಿ, ಗಿರಣಿಚಾಳ, ಉದ್ಯಮನಗರ, ನವನಗರ, ಟ್ರಾಫಿಕ್ ಐಲ್ಯಾಂಡ್ ಉಪಅಂಚೆ ಕಚೇರಿಗಳ ಎದುರು ಸಹ ಇದೇ ವಾತಾವರಣ ಇದೆ. ಅಂಚೆ ಕಚೇರಿಯಲ್ಲಿ ಮಹಿಳೆಯರು ಮೋದಿ ಖಾತೆ ತೆರೆದರೆ, ಮೂರು ತಿಂಗಳಿಗೊಮ್ಮೆ 3 ಸಾವಿರ ಖಾತೆಗೆ ಜಮಾ ಆಗುವುದು ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದನ್ನು ನಂಬಿದ ಮಹಿಳೆಯರು ಬೆಳಗ್ಗೆಯಿಂದಲೇ ಅಂಚೆ ಕಚೇರಿಗಳ ಎದುರು ಜಮಾಯಿಸಿದ್ದರು. ಅಂಚೆ ಕಚೇರಿಗಳ ಎದುರು ನೋಟಿಸ್ ಅಂಟಿಸಿ, ಸುಳ್ಳು ಸುದ್ದಿ ನಂಬಬೇಡಿ ಎಂದರೂ ನಂಬುತ್ತಿಲ್ಲ.
ಈ ಕುರಿತಂತೆ ಪ್ರಧಾನ ಅಂಚೆ ಕಚೇರಿಯ ಹಿರಿಯ ಪೋಸ್ಟ್‌ಮಾಸ್ಟರ್ ಎಂ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯರು ಸುಳ್ಳು ಸುದ್ದಿಯನ್ನು ನಂಬಿ ಅಂಚೆ ಕಚೇರಿಗೆ ಆಗಮಿಸುತ್ತಿದ್ದಾರೆ. ನಮ್ಮ ಅಂಚೆ ಕಚೇರಿಯಲ್ಲಿ ಈ ತರಹದ ಯಾವುದೇ ಸ್ಕೀಂ ಇಲ್ಲ. ಈ ಸುಳ್ಳು ಸುದ್ದಿಗೂ ಪೋಸ್ಟ್ ಆಫೀಸ್ಗೂ ಯಾವುದೇ ಸಂಬಂಧವಿಲ್ಲ. ಸುಳ್ಳು ಸುದ್ದಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದೇವೆ. ಆದ್ರೂ ಮಹಿಳೆಯರು ಕಿವಿಗೊಡುತ್ತಿಲ್ಲ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಅಂಚೆ ಕಚೇರಿ ಖಾಸಗೀಕರಣ ಇಲ್ಲ- ಕೇಂದ್ರ ಸರ್ಕಾರ: ಅಂಚೆ ಕಚೇರಿ ತಿದ್ದುಪಡಿ ಮಸೂದೆ ಅಂಗೀಕಾರ