ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೊ ರೈಲು ನಿಲ್ದಾಣಗಳಿಗೆ ಸಂಪರ್ಕವನ್ನು ಹೆಚ್ಚಿಸಲು ಇಂದಿರಾನಗರ ಮತ್ತು ಯಲಚೇನಹಳ್ಳಿ ಮೆಟ್ರೊ ನಿಲ್ದಾಣಗಳಲ್ಲಿ ಮಹಿಳೆಯರೇ ಚಾಲನೆ ಮಾಡಲಿರುವ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಬುಧವಾರ ಪರಿಚಯಿಸಲಾಯಿತು. ಕರ್ನಾಟಕ ಪರಿವರ್ತನಾ ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಮತ್ತು ಬ್ರ್ಯಾಂಡ್ ಬೆಂಗಳೂರು ಸಮಿತಿಯ ಸದಸ್ಯ, ಮಾಜಿ ಸಂಸದ ರಾಜೀವ್ ಗೌಡ ಪ್ರಾಯೋಗಿಕ ಉಪಕ್ರಮವನ್ನು ಪ್ರಾರಂಭಿಸಿದರು. ಬಿಎಂಆರ್‌ಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕಟಾರಿಯಾ ಉಪಸ್ಥಿತರಿದ್ದರು.
ಬಹುರಾಷ್ಟ್ರೀಯ ಕಂಪೆನಿ ಅಲ್‌ಸ್ಟೋಮ್, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಮೆಟ್ರೋರೈಡ್ ಸಹಯೋಗದಲ್ಲಿ ಇ-ಆಟೋಗಳನ್ನು ಹೊರತರಲಾಗಿದೆ. ಕಾರ್ಯಕ್ರಮದ ಪ್ರಾಯೋಗಿಕ ಹಂತದ ಭಾಗವಾಗಿ, ಯಲಚೇನಹಳ್ಳಿ ಮತ್ತು ಇಂದಿರಾನಗರ ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಆಟೋಗಳನ್ನು ಸೇವೆಗಾಗಿ ನಿಯೋಜಿಸಲಾಗುತ್ತಿದೆ. ಪ್ರತಿ ನಿಲ್ದಾಣದಿಂದ 4 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಾಗುವುದು ಎಂದು ಅಲ್‌ಸ್ಟೋಮ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಒಲಿವಿಯರ್ ಲೋಯ್ಸನ್ ತಿಳಿಸಿದರು.
ಇಂದಿರಾನಗರವನ್ನು ಪ್ರಾಯೋಗಿಕ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ. ಇದು ನಗರ ಕೇಂದ್ರಕ್ಕೆ ಸಮೀಪವಿರುವ ವಾಣಿಜ್ಯ ಕೇಂದ್ರ. ಆದ್ದರಿಂದ ಪ್ರತಿ ದಿನ ಭಾರಿ ಟ್ರಾಫಿಕ್ ಉಂಟಾಗುತ್ತಿದೆ. ಪ್ರಾಥಮಿಕವಾಗಿ ವಸತಿ ಪ್ರದೇಶವಾಗಿದ್ದರೂ ಯಲಚೇನಹಳ್ಳಿ ಕೂಡ ಪ್ರಮುಖ ಐಟಿ ಕೇಂದ್ರವಾಗಿ ವೇಗವಾಗಿ ಬದಲಾಗುತ್ತಿದೆ. ಈ ಎರಡು ನಿಲ್ದಾಣಗಳಲ್ಲಿನ ಸುಸ್ಥಿರ ಸಾರಿಗೆ ಆಯ್ಕೆಗಳನ್ನು ನೀಡಲು ಮತ್ತು ಕೊನೆಯ ಮೈಲಿ ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಈ ವ್ಯವಸ್ಥೆ ಗಮನಾರ್ಹ ಪ್ರಯೋಜನ ನೀಡಲಿದೆ. ಮಹಿಳಾ ಚಾಲಕರನ್ನು ನಿರ್ದಿಷ್ಟವಾಗಿ ಕಾರ್ಯಕ್ರಮದ ಅಡಿಯಲ್ಲಿ ತರಲಾಗಿದೆ. ಇ-ಆಟೋಗಳ ಮಹಿಳಾ ಚಾಲಕರೊಂದಿಗೆ ಮಹಿಳೆಯರು ಸುರಕ್ಷಿತವಾಗಿ ಪ್ರಯಾಣ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.
ಮೂರು ವರ್ಷಗಳ ಹಿಂದೆ ಪತಿ ತೀರಿಕೊಂಡ ನಂತರ ಆಟೋ ಓಡಿಸುತ್ತಿರುವ 40 ವರ್ಷದ ವಿಧವೆ ಸರಸ್ವತಿ ಉಪಕ್ರಮದ ಕುರಿತು ಮಾತನಾಡಿ, "ಮೆಟ್ರೋ ರೈಡ್ ಜೀವ ರಕ್ಷಕವಾಗಿದೆ. ಆಟೋರಿಕ್ಷಾವನ್ನು ಖರೀದಿಸಲು ಮುಂಗಡ ಹೂಡಿಕೆ ಮಾಡಬೇಕಾಗಿಲ್ಲ. ಮತ್ತೊಂದು ಪ್ರಯೋಜನವೆಂದರೆ, ಕೆಲಸದ ಸಮಯವನ್ನು ನಾನೇ ಆಯ್ಕೆ ಮಾಡಿಕೊಳ್ಳಬಹುದು. ನಾನು ಬೆಳಗಿನ ಪಾಳಿಗೂ ಸಹ ಕೆಲಸಕ್ಕೆ ಹೋಗಬಹುದು. ಸಂಜೆ 4 ಗಂಟೆಗೆ ಕೆಲಸ ಮುಗಿಸುತ್ತೇನೆ. ಇದರಿಂದ ನನ್ನ ಹೆಣ್ಣುಮಕ್ಕಳು ಕಾಲೇಜಿನಿಂದ ಹಿಂತಿರುಗುವ ಮೊದಲು ನಾನು ಮನೆಗೆ ಸೇರಬಹುದಾಗಿದೆ. ಪ್ರತಿ ದಿನ 800 ರೂ ಸಿಗುತ್ತದೆ. ಹೆಚ್ಚು ಓಡಾಡಲು ಸಾಧ್ಯವಾಗದಿದ್ದರಿಂದ ಮನೆಯ ಸಮೀಪದಲ್ಲಿರುವ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಆಟೋ ಓಡಿಸಲು ಆಯ್ಕೆ ಮಾಡಿಕೊಂಡಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ 'ಪಾಕ್ ಪರ ಘೋಷಣೆ' ಕೋಲಾಹಲ