ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಮಹಿಳೆಯರನ್ನು ಕಣಕ್ಕಿಳಿಸಿದ್ದೇ ಅಪರೂಪ. ಇಂತ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ರಾಜಕೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಬರೋಬ್ಬರಿ 44 ವರ್ಷಗಳು ಕಳೆದಿವೆ. ಅಂದರೆ 9 ಚುನಾವಣೆಗಳು ಗತಿಸಿ ಹೋಗಿವೆ. ಆದರೂ ಇಲ್ಲಿಯವರೆಗೂ ಯಾವ ಪಕ್ಷಗಳು ಮಹಿಳೆಯರಿಗೆ ಮಣೆ ಹಾಕಿಲ್ಲ.
ಡಾ. ಸರೋಜಿನಿ ಮಹಿಷಿ 1980ರಲ್ಲಿ ಧಾರವಾಡ ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದೇ ಕೊನೆ. ಅಂದಿನಿಂದ ಇದುವರೆಗೆ ಯಾವುದೇ ರಾಜಕೀಯ ಪಕ್ಷ ಮಹಿಳಾ ಅಭ್ಯರ್ಥಿಯನ್ನು ಧಾರವಾಡ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕೆ ಇಳಿಸಿಲ್ಲ. 1962ರ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾದ ಸರೋಜಿನಿ ಮಹಿಷಿ ಅವರನ್ನು ಕಣಕ್ಕೆ ಇಳಿಸಿತ್ತು. ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸರೋಜಿನಿ ಮಹಿಷಿ, 1967, 1971, 1977ರ ಚುನಾವಣೆವರೆಗೆ ಸತತವಾಗಿ 4 ಬಾರಿ ಕಾಂಗ್ರೆಸ್‌ನಿಂದ ಗೆದ್ದು, ಸಂಸತ್ ಸದಸ್ಯರಾಗಿದ್ದರು.
1980ರಲ್ಲಿ ಜನತಾ ಪಕ್ಷದಿಂದ ಕಣಕ್ಕೆ ಇಳಿದ ಸರೋಜಿನಿ ಮಹಿಷಿ, ಆ ಚುನಾವಣೆಯಲ್ಲಿ ಕಾಂಗ್ರೆಸ್ನ ಡಿ.ಕೆ ನಾಯ್ಕರ್ ವಿರುದ್ಧ ಸೋಲು ಕಂಡರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಈ ಕ್ಷೇತ್ರದಿಂದ ಮಹಿಳೆಯರಿಗೆ ಅವಕಾಶವನ್ನೇ ನೀಡಲಿಲ್ಲ. ಜನತಾ ಪಕ್ಷ, ಜನತಾ ದಳವೂ ಮಹಿಳಾ ಅಭ್ಯರ್ಥಿಗಳಿಗೆ ಮಣೆ ಹಾಕಲಿಲ್ಲ. 1996ರಿಂದ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಸಹ ಮಹಿಳೆಯರಿಗೆ ಟಿಕೆಟ್ ನೀಡಲಿಲ್ಲ. 1980ರ ಲೋಕಸಭೆ ಚುನಾವಣೆ ನಂತರ ಈ ಕ್ಷೇತ್ರ ಮಹಿಳೆಯರಿಗೆ ನಿಲುಕದ ನಕ್ಷತ್ರದಂತೆ ಆಗಿದೆ.
ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳು ಟಿಕೆಟ್ ಘೋಷಿಸಿದ್ದು, ಧಾರವಾಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ್ ಜೋಶಿ ಐದನೇ ಬಾರಿಗೆ ಕಣಕ್ಕೆ ಇಳಿದಿದ್ದರೆ, ಕಾಂಗ್ರೆಸ್ ನಿಂದ ವಿನೋದ ಅಸೂಟಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ : ಈಗಿರುವ ಎಲ್ಲ ಸಮಸ್ಯೆಗಳನ್ನು ಪಕ್ಷದ ನಾಯಕರು ಬಗೆಹರಿಸುವ ವಿಶ್ವಾಸವಿದೆ: ಬಿ ವೈ ರಾಘವೇಂದ್ರ - Lok Sabha Election