ಚಿಕ್ಕಮಗಳೂರು: ಭಾರಿ ಗಾಳಿ - ಮಳೆಗೆ ಮರ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎನ್.ಆರ್. ಪುರ ತಾಲೂಕಿನ ಕಾನೂರು-ಕಟ್ಟಿನಮನೆ ಗ್ರಾಮದಲ್ಲಿ ನಡೆದಿದೆ. ಕೊಪ್ಪ ತಾಲೂಕಿನ ಮೇಲಿನಪೇಟೆ ಮೂಲದ ಸವಿತಾ(48) ಮೃತ ದುರ್ದೈವಿ. ಮೃತ ಸವಿತಾ ಅವರ ತೋಟ ಕಟ್ಟಿನ ಮನೆ ಬಳಿ ಇತ್ತು. ತೋಟಕ್ಕೆ ಬಂದು ರಸ್ತೆ ಬದಿ ನಡೆದುಕೊಂಡು ಹೋಗುವಾಗ ಭಾರೀ ಗಾಳಿ-ಮಳೆಗೆ ಬೃಹತ್ ಮರವೊಂದು ಮುರಿದು ಮೈಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಇದೇ ವೇಳೆ, ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಮೇಲೂ ಮರ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎನ್.ಆರ್. ಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮಹಿಳೆ ಸಾವಿನ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿಗೆ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಇತ್ತೀಚಿಗೆ, ಮೂಡಿಗೆರೆ ತಾಲೂಕಿನಲ್ಲಿ ಮರ ಬಿದ್ದು ಓರ್ವ ಸಾವನ್ನಪ್ಪಿದ್ದರು. ಎನ್. ಆರ್. ಪುರ ತಾಲೂಕಿನಲ್ಲಿ ತೋಟದಿಂದ ಹಿಂದಿರುಗುವಾಗ ಸಿಡಿಲು ಬಡಿದು ಒಬ್ಬರು ಸಾವನ್ನಪ್ಪಿದ್ದರು. ಕಳೆದ ನಾಲ್ಕೈದು ದಿನಗಳಿಂದ ಮಲೆನಾಡು ಭಾಗದಲ್ಲಿ ಮಧ್ಯಾಹ್ನ ಆರಂಭವಾಗುವ ಮಳೆ ಸಂಜೆವರೆಗೂ ಸುರಿಯುತ್ತಿದ್ದು, ನಾನಾ ಅವಾಂತರ ಸೃಷ್ಟಿಸಿದೆ.
ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆ - RAIN FALL IN KARNATAKA