ವಿಜಯಪುರ: ಇಲ್ಲಿನ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಬಯಲಿಗೆ ಬಂದಿದೆ. ಇದೀಗ ನೊಂದ ಮಹಿಳೆಯು ದಯಾಮರಣಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ವಿವಿಯ ಉದ್ಯಾನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಈ ನೊಂದ ಮಹಿಳೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ತನಗಾದ ದೌರ್ಜನ್ಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ವಿವಿಯಲ್ಲಿ ನನ್ನ ಪತಿ ಬಸವರಾಜ ಕೆಲಸ ಮಾಡುತ್ತಿದ್ದರು. 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ 2016ರಿಂದ ಪತಿ ಮಾಡುತ್ತಿದ್ದ ಕೆಲಸಕ್ಕೆ ನಾನು ಸೇರ್ಪಡೆಯಾಗಿದ್ದಾನೆ. ಪತಿಯ ಮೃತಪಟ್ಟು 8 ವರ್ಷ ಕಳೆದರೂ ಪಿಎಫ್ ಹಣ ನೀಡದೇ ಸತಾಯಿಸಲಾಗುತ್ತಿದೆ. ಅಲ್ಲದೇ, ಮೇಲಧಿಕಾರಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿದರು.
ಕಿರುಕುಳದಿಂದ ನಾನು ಬೇಸತ್ತು ಕುಲಪತಿಗಳನ್ನು ಭೇಟಿ ಮಾಡಿದ್ದೆ. ನನ್ನ ಮಾನದ ಪ್ರಶ್ನೆಯಾಗಿದ್ದರಿಂದ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಕುಲಪತಿಗಳಿಗೆ ಮನವಿ ಮಾಡಿದ್ದೆ. ಇದಾದ ಬಳಿಕ ಮೇಲಾಧಿಕಾರಿ ಕುಲಪತಿಗಳನ್ನು ಭೇಟಿ ಮಾಡಿ ನನ್ನ ವಿರುದ್ಧವೇ ಇಲ್ಲಸಲ್ಲದ್ದನ್ನು ಹೇಳಿದ್ದಾರೆ. ಆದರೆ, ಕುಲಪತಿಗಳು ನನ್ನ ಮನವಿ ಬಗ್ಗೆ ವಿಚಾರಣೆ ಮಾಡಿಲ್ಲ. ಇದೇ ವೇಳೆ ಫೆಬ್ರವರಿಯಲ್ಲಿ ವಿವಿಯ ಆಂತರಿಕ ದೂರು ಸಮಿತಿಗೆ ಲಿಖಿತವಾಗಿ ದೂರು ನೀಡಿದ್ದೆ. ಆದರೂ, ನನಗೆ ನ್ಯಾಯ ಕೊಡಿಸದೇ, ಆರೋಪಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಈ ಎಲ್ಲ ಕಾರಣದಿಂದ ನಾನು ನೊಂದು ಮೂರು ಜನ ಮಕ್ಕಳೊಂದಿಗೆ ಬದುಕುವುದು ಕಷ್ಟವಾಗಿದೆ. ಹೀಗಾಗಿ ದಯಾಮರಣಕ್ಕೆ ಅನುಮತಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಅಧಿಕಾರಿಯಿಂದ ಮಹಿಳಾ ಸೆಕ್ಯೂರಿಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು