ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ನಗರದ ಡಾಲರ್ಸ್ ಕಾಲೊನಿಯಲ್ಲಿರುವ ಮಾಜಿ ಸಿಎಂ ಹಾಗು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರ ನಿವಾಸ ಧವಳಗಿರಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಚುನಾವಣೆ ಗೆದ್ದ ಅಭ್ಯರ್ಥಿಗಳು ಭೇಟಿ ನೀಡಿ ಬಿಎಸ್‌ವೈ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.
ಹಾವೇರಿ ನೂತನ ಸಂಸದ ಬಸವರಾಜ ಬೊಮ್ಮಾಯಿ, ಚಿತ್ರದುರ್ಗ ನೂತನ ಸಂಸದ ಗೋವಿಂದ ಕಾರಜೋಳ, ಚಿಕ್ಕಬಳ್ಳಾಪುರ ನೂತನ ಸಂಸದ ಡಾ.ಕೆ.ಸುಧಾಕರ್ ಅವರು ಯಡಿಯೂರಪ್ಪನವರಿಗೆ ಧನ್ಯವಾದ ತಿಳಿಸಿ, ಆಶೀರ್ವಾದ ಪಡೆದುಕೊಂಡರು. ಕೆಲ ಹೊತ್ತು ಫಲಿತಾಂಶದ ಕುರಿತು ಚರ್ಚಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ, ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳಿದರು. ತೇಜಸ್ವಿ ಸೂರ್ಯ ಕೂಡ ಬಿಎಸ್ವೈ ಭೇಟಿಗೆ ಸಮಯ ಪಡೆದುಕೊಂಡಿದ್ದು, ಸಂಜೆ ವಿ.ಸೋಮಣ್ಣ ಕೂಡ ಹಿರಿಯ ನಾಯಕನ ನಿವಾಸಕ್ಕೆ ಆಗಮಿಸಿ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ.
ಬಿಎಸ್ವೈ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, "ಕಾಂಗ್ರೆಸ್‌ನವರು ಮೋಸದಿಂದ 9 ಸ್ಥಾನ ಗೆದ್ದಿದ್ದಾರೆ. ಅಡ್ವಾನ್ಸ್ ಆಗಿ ಗ್ಯಾರಂಟಿ ಕೊಟ್ಟು ಮೋಸ ಮಾಡಿದರು. ಒಂದು ವರ್ಷದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ನೆರೆ ರಾಜ್ಯಗಳಿಗೆ ಇಲ್ಲಿ ಲೂಟಿ ಹೊಡೆದು ಹಣ ಕಳುಹಿಸಿದ್ದಾರೆ. ಕಾಂಗ್ರೆಸ್ನವರ ಜಯ ನಿಜವಾದ ಜಯವಲ್ಲ. ಚಿತ್ರದುರ್ಗದಲ್ಲಿ ನನಗೆ ಜನರ ಆಶೀರ್ವಾದ ಸಿಕ್ಕಿದೆ. ಜನರ ನಿರೀಕ್ಷೆಯಂತೆ ನಾವು ಕೆಲಸ ಮಾಡುತ್ತೇವೆ" ಎಂದು ತಿಳಿಸಿದರು.