ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಕ್ರಿಕೆಟ್ ಬೆಟ್ಟಿಂಗ್ ದಂಧೆ ಮತ್ತು ಡ್ರಗ್ಸ್ ಮಾರಾಟ ಸದ್ದು ಮಾಡಿತು. ಬೆಟ್ಟಿಂಗ್ನಿಂದ ರಾಜ್ಯದ ಜನರು ಹಾಳಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಸದನದಲ್ಲಿ ಒಕ್ಕೊರಲ ಒತ್ತಾಯ ಕೇಳಿಬಂತು. ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾಪಿಸಿದ ಮಂಡ್ಯ ಶಾಸಕ ಗಣಿಗ ರವಿ, "ಮಂಡ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ನಿಂದ ಯುವಕರ ಜೀವನ ಹಾಳಾಗುತ್ತಿದೆ. ಬೆಟ್ಟಿಂಗ್ಗಾಗಿ 11 ಸಾವಿರ ರೂ.ಗೆ ಯುವಕನ ಕೊಲೆ ನಡೆದಿದೆ. ಜಿಲ್ಲೆಯ ಪ್ರತಿ ಮನೆಯಲ್ಲೂ ಯುವಕರು ಬೆಟ್ಟಿಂಗ್ ಆಡುತ್ತಿದ್ದಾರೆ. ದಂಧೆಕೋರರು ಯುವಕರ ಆಸ್ತಿ, ಬೈಕ್‌ಗಳನ್ನು ಕಿತ್ತುಕೊಳ್ಳುತ್ತಿದ್ದಾರೆ" ಎಂದು ಕಳವಳ ವ್ಯಕ್ತಪಡಿಸಿದರು.
"ಕ್ರಿಕೆಟ್ ಬೆಟ್ಟಿಂಗ್ ನಡೆಸುವವರು ಮೂರು ಪಕ್ಷದ ಜೊತೆಗೂ ಗುರುತಿಸಿಕೊಳ್ಳುತ್ತಿದ್ದಾರೆ. ಮಂಡ್ಯಕ್ಕೆ ಬಂದಿದ್ದ ಮಾಜಿ ಸಿಎಂ ಒಬ್ಬರು ಕ್ರಿಕೆಟ್ ಬುಕ್ಕಿಯನ್ನು ಬಿಡುಗಡೆ ಮಾಡಲು ಎಸ್ಪಿಗೆ ಕರೆ ಮಾಡಿದ್ದರು. ರಾಜಕಾರಣಿಗಳು ಬುಕ್ಕಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಬುಕ್ಕಿಗಳನ್ನು ಮಟ್ಟ ಹಾಕಬೇಕು. ಇವರ ಜೊತೆಗಿನ ಪೊಲೀಸರ ಹೊಂದಾಣಿಕೆಯನ್ನು ತಪ್ಪಿಸಬೇಕು" ಎಂದು ಅವರು ಮನವಿ ಮಾಡಿದರು.
ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, "ಇದು ಸಾಮಾಜಿಕ ಪಿಡುಗು. ಒಂದು ಕ್ರಿಕೆಟ್ ಮ್ಯಾಚ್‌ನಲ್ಲಿ ಒಂದು ಸಾವಿರ ಕೋಟಿ ಬೆಟ್ಟಿಂಗ್ ನಡೆಯತ್ತದೆ. ಇದು ಕೇವಲ ಮಂಡ್ಯ ಮಾತ್ರವಲ್ಲ, ಬೆಂಗಳೂರಿನಲ್ಲೂ ನಡೆಯುತ್ತದೆ. ಇವರಾರೂ ಪೊಲೀಸರಿಗೆ ಬಗ್ಗಲ್ಲ. ಸದನದಲ್ಲಿ ಇರುವವರೇ ಇವರ ಪರವಾಗಿ ರೆಕಮೆಂಡ್ ಮಾಡಲು ಬರ್ತಾರೆ. ಇದನ್ನು ಮಟ್ಟ ಹಾಕಲು ವಿಶೇಷ ಘಟಕ ಮಾಡಿ" ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬಿಜೆಪಿ ಸದಸ್ಯ ಶರಣು ಸಲಗಾರ್ ಮಾತನಾಡಿ, "ರಾಜ್ಯದಲ್ಲಿ ಅತ್ಯಂತ ಅಪಾಯಕಾರಿ ವಿಷಯ ಕ್ರಿಕೆಟ್ ಬೆಟ್ಟಿಂಗ್ ಹಾಗೂ ರಮ್ಮಿ ಗೇಮ್. ಪ್ರತಿಯೊಂದು ತಾಲೂಕಿನಲ್ಲೂ ಬೆಟ್ಟಿಂಗ್ ನಡೆಸುತ್ತಾರೆ. ಹೋಂ ಮಿನಿಸ್ಟರ್ ಆದೇಶ ಮಾಡಿದರೆ ಸಂಜೆಯೊಳಗೆ ಅವರು ಜಾಮೀನು ಪಡೆಯುತ್ತಾರೆ. ಹೀಗೇ ಬಿಟ್ಟರೆ ಕ್ರಿಕೆಟ್ ಬೆಟ್ಟಿಂಗ್ ನಡೆಸುವ ಐವತ್ತು ಜನ ಶಾಸಕರಾಗ್ತಾರೆ. ಇದನ್ನು ಮಟ್ಟ ಹಾಕಿದರೆ ಗೃಹ ಸಚಿವರು ದೇವರಾಗ್ತಾರೆ" ಎಂದರು.
ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಕ್ರಮ-ಗೃಹ ಸಚಿವ ಪರಮೇಶ್ವರ್: ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, "ಮಂಡ್ಯದಲ್ಲಿ 2021ರಲ್ಲಿ ಬೆಟ್ಟಿಂಗ್ ಸಂಬಂಧ ಎರಡು ಪ್ರಕರಣಗಳು ದಾಖಲಾಗಿದ್ದವು. ಒಬ್ಬರಿಗೆ ಶಿಕ್ಷೆಯಾಗಿದೆ. 2022ರಲ್ಲೂ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಇದು ರಾಜ್ಯವ್ಯಾಪಿ ನಡೆಯುತ್ತಿರುವ ದಂಧೆ. ಇದನ್ನು ನಿಲ್ಲಿಸಬೇಕೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇದನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮವಹಿಸುತ್ತೇವೆ. ರಾಜ್ಯದ ವತಿಯಿಂದ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ. ಕೇಂದ್ರ ಸರ್ಕಾರವೂ ಕ್ರಮ ವಹಿಸುವ ಅಗತ್ಯ ಇದೆ" ಎಂದರು.
ಇದೇ ವೇಳೆ ಡ್ರಗ್ಸ್ ಪಿಡುಗು ವಿಚಾರವಾಗಿ ಪ್ರತಿಕ್ರಿಯಿಸಿ, "ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಲು ಯೋಜಿಸಿದ್ದೇವೆ. ಈವರೆಗೆ ಸುಮಾರು 6,764 ಪ್ರಕರಣ ದಾಖಲು ಮಾಡಿದ್ದೇವೆ. ಎಂಟು ತಿಂಗಳಲ್ಲಿ 9,645 ಕೆಜಿ ಗಾಂಜಾ ಹಾಗೂ 233 ಕೆಜಿ ಸಿಂಥೆಟಿಕ್ಸ್ ಡ್ರಗ್ಸ್ ವಶಕ್ಕೆ ಪಡೆದಿದ್ದೇವೆ. ಎಲ್ಲಾ ಜಿಲ್ಲೆಗಳನ್ನೂ ಡ್ರಗ್ಸ್ ಮುಕ್ತ ಮಾಡುವಂತೆ ಎಸ್ಪಿಗಳಿಗೆ ಸೂಚನೆ ನೀಡಿದ್ದೇವೆ. ಶಾಲೆಗಳಲ್ಲಿ ಮಕ್ಕಳಿಗೆ ಚಾಕೊಲೇಟ್‌ನಲ್ಲಿ ಡ್ರಗ್ಸ್ ಕೊಡುತ್ತಾರೆ. ಡ್ರಗ್ಸ್ ಆರೋಪಿಗಳಾದ 245 ಜನ ವಿದೇಶಿಗರನ್ನು ಡಿಪೋರ್ಟ್ ಮಾಡಿದ್ದೇವೆ. ಶೀಘ್ರದಲ್ಲೇ ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ" ಎಂದು ಭರವಸೆ ನೀಡಿದರು.
ಇದನ್ನೂ ಓದಿ: 'ಡ್ರಗ್ಸ್ ಮುಕ್ತ ಕರ್ನಾಟಕ' ಅಭಿಯಾನ; ಜಪ್ತಿ ಮಾಡಿದ್ದ 36 ಕೋಟಿ ಮೌಲ್ಯದ ಮಾದಕ ವಸ್ತುವಿಗೆ ಬೆಂಕಿ