ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿಯೊಂದಿಗೆ ಹುಲಿಗಳ ತೊಂದರೆಯೂ ಜೋರಾಗಿದೆ. ಹುಲಿ ದಾಳಿಗೆ ಐದು ಹಸುಗಳು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಠಾರದಹಳ್ಳಿಯಲ್ಲಿ ನಡೆದಿದೆ.
ಚಂದ್ರು-ಮುಳ್ಳಪ್ಪ ಎಂಬವರಿಗೆ ಸೇರಿದ ಹಸುಗಳು ಹುಲಿ ದಾಳಿಗೆ ತುತ್ತಾಗಿವೆ. ಮೊನ್ನೆ ಮೇಯಲು ಹೋಗಿದ್ದ ಹಸುಗಳು ಮನೆಗೆ ಬಂದಿರಲಿಲ್ಲ. ನಿನ್ನೆ ಕಾಫಿ ತೋಟದಲ್ಲಿ ಹಸುಗಳ ಕಳೇಬರ ಸಿಕ್ಕಿದೆ. ಒಂದು ಹಸು ತೀವ್ರ ನಿತ್ರಾಣಗೊಂಡಿದ್ದು ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ಆನೆ ದಾಳಿಯಿಂದ ಕಂಗಾಲಾಗಿದ್ದ ಜನರು ಹುಲಿ ದಾಳಿಯಿಂದ ಆತಂಕದಲ್ಲಿ ದಿನ ದೂಡುವಂತಾಗಿದೆ. ಮನೆಯಿಂದ ಹೊರಬರಲು ಜನರು, ವಿಶೇಷವಾಗಿ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಕಠಾರದಹಳ್ಳಿ ಗ್ರಾಮದ ಸುತ್ತಮುತ್ತಲ ಜನರು ಭಯ, ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮುಂದುವರಿದ ಕಾಡಾನೆಗಳ ಸಮಸ್ಯೆ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ನಿನ್ನೆ ಮೊನ್ನೆಯದ್ದಲ್ಲ. ದಿನ ದಿನಕ್ಕೆ ಈ ಭಾಗದಲ್ಲಿ ಇವುಗಳ ಹಾವಳಿ ಮಿತಿಮೀರುತ್ತಿದೆ. ಗುರುವಾರ ಮತ್ತೆ ಉಪಟಳ ಪ್ರಾರಂಭವಾಗಿದೆ. ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ಬೆಳೆ ನಾಶಪಡಿಸಿವೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮದಲ್ಲಿ ತೋಟಗಳಿಗೆ ನುಗ್ಗಿ ಅಡಿಕೆ, ಬಾಳೆ, ಕಾಫಿ, ಮೆಣಸು ಪುಡಿಗಟ್ಟಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಳಾಗಿವೆ. ಕಾಡು ಪ್ರಾಣಿಗಳ ದಾಳಿಯಿಂದ ಚಾರ್ಮಾಡಿ ಘಾಟ್ ರಸ್ತೆ ಪಕ್ಕದಲ್ಲಿರುವ ತರುವೆ ಗ್ರಾಮದಲ್ಲಿ ರೈತರು ಹೈರಾಣಾಗಿದ್ದಾರೆ. ರೈತ ನವೀನ್ ಎಂಬವರ ತೋಟಕ್ಕೆ ನುಗ್ಗಿದ್ದ ಕಾಡಾನೆಯೊಂದು ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ.
ಇದನ್ನೂ ಓದಿ: ಚಾಮರಾಜನಗರ: ಆನೆ ತುಳಿತಕ್ಕೆ ಯುವಕ ಬಲಿ
ಶಾಶ್ವತ ಪರಿಹಾರಕ್ಕೆ ಒತ್ತಾಯ: ಕೊಟ್ಟಿಗೆಹಾರ ಸುತ್ತಮುತ್ತಲ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ. ಕಾಫಿ ತೋಟದ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೆಮುಂದೆ ನೋಡುತ್ತಿದ್ದಾರೆ. ಬೆಳೆ ನಷ್ಟ, ಕೂಲಿ ಕಾರ್ಮಿಕರ ಕೊರತೆ ಬೆಳೆಗಾರರ ತಲೆನೋವು ಹೆಚ್ಚಿಸಿದೆ. ಕಳೆದ 3-4 ತಿಂಗಳಿಂದ ಮೂಡಿಗೆರೆಯಲ್ಲಿ ನಿರಂತರವಾಗಿ ಕಾಡಾನೆ ಸಮಸ್ಯೆಯಿದೆ. ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಮೂಡಿಗೆರೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೂಡಲೇ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆನೆ ದಾಳಿಗೆ ಯುವಕ ಸಾವು: ಆನೆ ದಾಳಿಗೆ ಯುವಕ ಕೊನೆಯುಸಿರೆಳೆದ ಘಟನೆ ಚಾಮರಾಜನಗರದ ಬಿಳಿಗಿರಿ ರಂಗನಬೆಟ್ಟ ಹುಲಿಸಂರಕ್ಷಣ ವ್ಯಾಪ್ತಿಯ ಹನೂರು ತಾಲೂಕಿನ ಕತ್ತೆಕಾಲು ಪೋಡು ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮಾದ (23) ಮೃತಪಟ್ಟ ಯುವಕ. ಹಿರಿಯಂಬಲ ಗ್ರಾಮಕ್ಕೆ ಹೋಗಿ ವಾಪಸ್ ಬರುತ್ತಿರುವಾಗ ಜಮೀನಿನಲ್ಲಿದ್ದ ಆನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.