ಬೆಂಗಳೂರು: "ನಾವು ಸಂವಿಧಾನದ ಮಾಲೀಕರು. ಸಂವಿಧಾನ ಕಿತ್ತು ಎಸೆಯುವುದರಲ್ಲಿ ನಮ್ಮ ಆಸಕ್ತಿಯಲ್ಲ, ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಗರದ ಅರಮನೆ ಮೈದಾನದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಸಂವಿಧಾನದ ವಿರುದ್ಧ ಎರಡು ಅಪಪ್ರಚಾರಗಳು ನಡೆಯುತ್ತಿದೆ. ಸಂವಿಧಾನ ದಲಿತರ ಉದ್ಧಾರಕ್ಕಾಗಿದೆ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸ್ಪಷ್ಟವಾಗಿ ಹೇಳುವುದರಿಂದ ಇದರ ವಿರುದ್ಧ ಇರುವ ಜನರು ಅಪಪ್ರಚಾರ ಮಾಡುತ್ತಿದ್ದಾರೆ. 1950 ಜನವರಿ 26 ರಿಂದ ಜಾರಿಗೆ ಬಂದಾಗಿನಿಂದ ಈ ಅಪಪ್ರಚಾರ ನಡೆಯುತ್ತಿದೆ. ಇದನ್ನು ನಾವು ಯಾರೂ ಸಹಿಸಬಾರದು. ಸಂವಿಧಾನ ರಕ್ಷಣೆಯಾದರೆ ನಾವೆಲ್ಲರೂ ಉಳಿಯುತ್ತೇವೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುತ್ತೇವೆ" ಎಂದರು.
ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕಬೇಕು: "ದೇಶದಲ್ಲಿ ಅಸಮಾನತೆಯನ್ನು ತೊಲಗಿಸಬೇಕು. ನಾವು ವೈರುಧ್ಯ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ ಅಸಮಾನತೆಯುಳ್ಳ ಸಮಾಜದಲ್ಲಿ ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ಅಸಮಾನತೆಯಿಂದ ನರಳುವವರು ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದರು. ಸಾಮಾಜಿಕ ಅಸಮಾನತೆ ಅಳಿಸಿಹಾಕುವುದು ಪ್ರತಿ ಸರ್ಕಾರದ ಜವಾಬ್ದಾರಿ. ಸಂವಿಧಾನ ಯಶಸ್ವಿಯಾಗಲು ಇದು ಯಾರ ಕೈಯಲ್ಲಿ ಇದೆ ಎನ್ನುವುದು ಮುಖ್ಯ" ಎಂದರು.
"ಸಂವಿಧಾನ, ಸಮಾನತೆ, ಮಾನವ ಸಮಾಜದ ನಿರ್ಮಾಣದ ಪರವಾಗಿರುವವರ ಕೈಯಲ್ಲಿದ್ದರೆ ಸಂವಿಧಾನ ಯಶಸ್ವಿಯಾಗುತ್ತದೆ. ಸಂವಿಧಾನಕ್ಕೆ ವಿರುದ್ಧವಾಗಿರುವವರ ಕೈಯಲ್ಲಿದ್ದರೆ ನಮಗೆ ಉಳಿಗಾಲವಿಲ್ಲ. ಸಂವಿಧಾನದ ಆಶಯಗಳು ಈಡೇರಲು ಸಂವಿಧಾನದ ಪರವಾಗಿರುವವರ ಕೈಯಲ್ಲಿ ಅಧಿಕಾರವಿರಬೇಕು" ಎಂದು ತಿಳಿಸಿದರು.
"ಸಂವಿಧಾನ ಜಾರಿಯಾದ ಅಮೃತ ಮಹೋತ್ಸವ ಆಚರಣೆ ನಿಮಿತ್ತ ಸಂವಿಧಾನದ ಪೀಠಿಕೆ, ಆಶಯಗಳನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕೆಂದು 2024 ಜನವರಿ 26 ರಿಂದ ರಾಜ್ಯದಲ್ಲಿ ಸಂವಿಧಾನ ಜಾಥಾ ಹಮ್ಮಿಕೊಳ್ಳಲಾಗಿದೆ. 31 ಜಿಲ್ಲೆಗಳಲ್ಲಿ ಸಂವಿಧಾನದ ಉದ್ದೇಶ, ಅಗತ್ಯ, ಅನಿವಾರ್ಯತೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗಿದೆ. ಎರಡು ದಿನಗಳ ಕಾಲ ರಾಷ್ಟ್ರೀಯ ಏಕತೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ' ಎಂದರು.
ಶ್ರೇಷ್ಠ ಸಂವಿಧಾನ: ಸಂವಿಧಾನವನ್ನು ಓದುವಂತೆ ಸಲಹೆ ನೀಡಿದ ಮುಖ್ಯಮಂತ್ರಿ, "ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅನೇಕ ದೇಶಗಳ ಸಂವಿಧಾನ ಓದಿ ಅರ್ಥ ಮಾಡಿಕೊಂಡು ದೇಶದ ಸಮಸ್ಯೆಗಳಿಗೆ ಅಪರಿಹಾರ ಸೂಚಿಸುವ ರೀತಿಯಲ್ಲಿ ಸಂವಿಧಾನ ರಚಿಸಿದ್ದಾರೆ. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನ" ಎಂದರು.
ಇದೇ ಸಂದರ್ಭದಲ್ಲಿ ಸಿಎಂ ಅತ್ಯುತ್ತಮ ಚಟುವಟಿಕೆ ಆಯೋಜಿಸಿದ್ದ ತುಮಕೂರು ಜಿಲ್ಲೆ, ದಾವಣಗೆರೆ, ಮೈಸೂರು, ಕೊಡಗು, ಬಳ್ಳಾರಿ ಜಿಲ್ಲೆಗಳಿಗೆ ಬಹುಮಾನ ಹಾಗೂ ನೆನಪಿನ ಕಾಣಿಕೆ ವಿತರಿಸಿದರು.
ಸಂವಿಧಾನದ ಆಶಯಗಳ ಪ್ರತಿಪಾದನೆ ಮಾಡುತ್ತೇವೆ: ಸಮಾರಂಭದಲ್ಲಿ ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, "ನಾವು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ. ಸಂವಿಧಾನದಾನದ ಆಶಯಗಳನ್ನು ಪ್ರತಿಪಾದನೆ ಮಾಡುತ್ತಾ ಇದ್ದೇವೆ. ಜೊತೆಗೆ ಅದನ್ನು ನಿರ್ದೇಶನ ಮಾಡುವ ಕಾರ್ಯವನ್ನು ನಾವು ಮಾಡಿ ತೋರಿಸಿದ್ದೇವೆ. ಈ ಬಾರಿ ಅಧಿಕಾರಕ್ಕೆ ಬಂದ ತಕ್ಷಣ ನಮ್ಮ ಸಿಎಂ ಹಾಗೂ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದೋದನ್ನು ಕಡ್ಡಾಯ ಮಾಡಿ, ಎಲ್ಲರಿಗೂ ಸಂವಿಧಾನದ ಆಶಯ ಅರ್ಥವಾಗುವಂತೆ ಮಾಡಿದೆ" ಎಂದರು.
"ರಾಜ್ಯದ 5,600 ಪಂಚಾಯಿತಿಗಳಲ್ಲಿ ಸಂವಿಧಾನ ಜಾಥಾ ಜನಜಾಗೃತಿ ಮಾಡಿದೆ. ಇದರ ಜೊತೆಗೆ ಇಂದು ನಾಳೆ ಸಮಾರಂಭದಲ್ಲಿ ಸೆಮಿನಾರ್ ನಡೆಸಿ ಸಂವಿಧಾನದ ಮೂಲ ಆಶಯವನ್ನು ಜನರಿಗೆ ತಿಳಿಸಿಕೊಡುವುದಾಗಿದೆ. 75 ವರ್ಷಗಳಲ್ಲಿ ಸಂವಿಧಾನ ಬಂದರೂ ಸಮಾನತೆ ಇನ್ನೂ ಸಮಸಮಾಜವಾಗಿ ಹಂಚಿಕೆಯಾಗಿಲ್ಲ. ಕೆಲ ಜನ ಇನ್ನೂ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಸರ್ವಾಧಿಕಾರಿ ಧೋರಣೆ ಹಾಗೂ ಆಶಯಕ್ಕೆ ಭಂಗ ತರುವಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಯಾವುದೇ ರಾಜಕೀಯ ಲಾಭ ಇಲ್ಲದೆ. ಓಟಿನ ಲೆಕ್ಕಾಚಾರ ಇಲ್ಲದೆ. ಜನಕ್ಕೆ ಸಂವಿಧಾನದ ಆಶಯ ಹಾಗೂ ಸಮೃದ್ಧ ಭಾರತ ಕಟ್ಟಲು ಅನುವಾಗುವ ಕಾರ್ಯಕ್ಕೆ ಅನುವು ಮಾಡುತ್ತಿದೆ. ಚಳುವಳಿ ರೂಪದಲ್ಲಿ ನಮ್ಮ ಸಂವಿಧಾನ ನಮ್ಮ ಜೀವನ ಅನ್ನೋ ರೀತಿ ಭ್ರಾತೃತ್ವ ರೂಪಿಸುವ ಕಾರ್ಯವನ್ನು ಮಾಡಬೇಕಿದೆ. ಇದನ್ನೊಂದು ಚಳುವಳಿ ರೂಪದಲ್ಲಿ ಕೊಂಡೊಯ್ಯಬೇಕಿದೆ" ಎಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಐದು ವರ್ಷದ ಬಾಲಕನಿಂದ ಸಂವಿಧಾನ ಪೀಠಿಕೆ ಬೋಧನೆ