ಮಂಗಳೂರು: ರಾಜ್ಯ ವಿಧಾನಸಭೆಯಿಂದ ಆಯ್ಕೆಯಾಗುವ ವಿಧಾನ ಪರಿಷತ್ ಸದಸ್ಯರ ಚುನಾವಣೆ ಮುಗಿದಿದ್ದು, ಇದರಲ್ಲಿ ಆಯ್ಕೆಯಾದ ರಾಜ್ಯದ 11 ಮಂದಿಯಲ್ಲಿ ಮಂಗಳೂರಿನ ಐವನ್ ಡಿಸೋಜ ಕೂಡ ಒಬ್ಬರು. ಐವನ್ ಡಿಸೋಜ ಅವರು ಎರಡನೇ ಬಾರಿಗೆ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ. ಹಲವು ಲೆಕ್ಕಾಚಾರದ ನಡುವೆ ಐವನ್ ಡಿಸೋಜ ಅವರನ್ನು ಎರಡನೇ ಬಾರಿಗೆ ಎಂಎಲ್ಸಿಯಾಗಿ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದೆ.
ಐವನ್ ಡಿಸೋಜ ಮೂಲತಃ ಜನತಾ ಪರಿವಾರದಿಂದ ಬಂದವರು. ಇದೀಗ ಮಂಗಳೂರಿನ ಪ್ರಮುಖ ಕಾಂಗ್ರೆಸ್ ನಾಯಕ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತಾದಳದೊಂದಿಗೆ ಇರುವಾಗ ಐವನ್ ಡಿಸೋಜ ಅವರು ಜನತಾದಳದಲ್ಲಿ ಇದ್ದರು. ಆ ಬಳಿಕ ಅವರು ಕಾಂಗ್ರೆಸ್ ಸೇರಿದರು, ಆ ನಂತರ ಕಾಂಗ್ರೆಸ್ ಸೇರ್ಪಡೆಯಾದ ಸಿದ್ದರಾಮಯ್ಯ ಆಪ್ತರಲ್ಲೊಬ್ಬರಾದರು. ಸಿದ್ದರಾಮಯ್ಯ ಅವರು 2013 ರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಐವನ್ ಡಿಸೋಜ ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿಯೆ ಐವನ್ ಡಿಸೋಜ ಅವರನ್ನು ವಿಧಾನಸಭೆಯಿಂದ ಆಯ್ಕೆ ಮಾಡುವ ವಿಧಾನ ಪರಿಷತ್ ಸದಸ್ಯತ್ವಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಆಪ್ತರಾಗಿರುವ ಐವನ್ ಡಿಸೋಜ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಎಂಎಲ್ಸಿಯಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆ, ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರು: ಐವನ್ ಡಿಸೋಜ 2019 ರಲ್ಲಿ ದಕ್ಷಿಣ ಕನ್ನಡದಿಂದ ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರು. 2018, 2023 ರಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ವಿಧಾನ ಪರಿಷತ್ ಟಿಕೆಟ್ ಕೊಡುವ ಭರವಸೆ ನೀಡಲಾಗಿತ್ತು. ಅದರಂತೆ ಈ ಬಾರಿ ವಿಧಾನಪರಿಷತ್ಗೆ ಎರಡನೇ ಬಾರಿಗೆ ಆಯ್ಕೆ ಮಾಡಲಾಗಿದೆ.
ಜಾತಿ ಲೆಕ್ಕಾಚಾರ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ವಿಧಾಣಸಭಾ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಮತದಾರರ ಸಂಖ್ಯೆ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಐವನ್ ಡಿಸೋಜ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೋ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಜೆ.ಆರ್. ಲೋಬೋ ಕೂಡ ಚುನಾವಣೆಯಲ್ಲಿ ಸೋತಿದ್ದರು. ಈ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ ಕೋಟಾದಲ್ಲಿ ಶಾಸನ ಸಭೆಯಲ್ಲಿ ಪ್ರತಿನಿಧಿಗಳು ಇರಬೇಕೆಂಬ ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ಕ್ರಿಶ್ಚಿಯನ್ ಆಗಿರುವ ಐವನ್ ಡಿಸೋಜ ಅವರ ಆಯ್ಕೆ ಆಗಿದೆ.
ಸಮರ್ಥ ವಾದ ಮಂಡನೆ: ಐವನ್ ಡಿಸೋಜ ವಕೀಲರು. ಶಾಸನ ಸಭೆಯಲ್ಲಿ ಸಮರ್ಥ ವಾದ ಮಂಡಿಸುತ್ತಾರೆ. ಕಳೆದ ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ದರು. ಕಾನೂನಿನ ಜ್ಞಾನದ ಜೊತೆಗೆ ಸಮರ್ಥವಾದ ವಾದ ಅವರ ಪ್ಲಸ್ ಪಾಯಿಂಟ್. ಇದು ಅವರ ಆಯ್ಕೆಗೆ ಕಾರಣಗಳಲ್ಲೊಂದು.
ಎಂಎಲ್ಸಿ ಆಗಿದ್ದಾಗ ಸಾಧನೆ: ಕಳೆದ ಅವಧಿಯಲ್ಲಿ ಎಂಎಲ್ಸಿಯಾಗಿದ್ದಾಗ ಮೊದಲ ಬಾರಿಗೆ ಆಯ್ಕೆಯಾಗಿದ್ದರೂ ಅವರಿಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಹುದ್ದೆಯನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿತ್ತು. ಎಂಎಲ್ಸಿ ಆಗಿದ್ದಾಗ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸುಮಾರು 6 ಕೊಟಿ ರೂ. ಗೂ ಹೆಚ್ಚಿನ ಪರಿಹಾರವನ್ನು ಸಂತ್ರಸ್ತರಿಗೆ ನೀಡಲು ಕಾರಣರಾಗಿದ್ದರು. ಅವರ ಸಾಧನೆ ಮತ್ತೊಮ್ಮೆ ಅವರಿಗೆ ಎಂಎಲ್ಸಿ ಹುದ್ದೆ ಅರಸಿ ಬಂದಿದೆ.
ಈ ಬಗ್ಗೆ ಮಾತನಾಡಿದ ಐವನ್ ಡಿಸೋಜ, ನಾನೊಬ್ಬ ಪಕ್ಷದ ಕಾರ್ಯಕರ್ತ. 1994 ರಲ್ಲಿ ಜನತಾದಳದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೆ. 2003 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದೆ. ಆಗ ಅವಕಾಶ ಸಿಗಲಿಲ್ಲ. 2008 ರಲ್ಲಿ ಮಂಗಳೂರು ದಕ್ಷಿಣ ವಿಧಾನಸಭೆಯಿಮದ ನಾನು ಸ್ಪರ್ಧಿಸಿ 7 ಸಾವಿರ ಮತಗಳಿಂದ ಸೋತಿದ್ದೆ. 2013 ರಲ್ಲಿ ನನಗೆ ಅವಕಾಶ ಸಿಗಲಿಲ್ಲ. 2014 ರಲ್ಲಿ ಸಿದ್ದರಾಮಯ್ಯ ಅವರು ಎಂಎಲ್ಸಿ ಸ್ಥಾನ ನೀಡಿದರು. ಅದರಲ್ಲಿ ನಾನು ಶೇಕಡ 100 ಹಾಜರಾತಿ ಹೊಂದಿದ್ದು, ಎಲ್ಲಾ ಚರ್ಚೆಗಳಲ್ಲಿ ಪಾಲ್ಗೊಂಡಿದ್ದೆ. ನನಗೆ ಸದನ ವೀರ ಪ್ರಶಸ್ತಿ ಕೊಟ್ಟರು. ಸಮರ್ಥ ನಿರ್ವಹಣೆ ಮಾಡಿದೆ. ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಮಾಡಿದ್ದರು. ಮೊನ್ನೆ ನಡೆದ ಚುನಾವಣೆಯಲ್ಲಿ ಈಶಾನ್ಯ ರಾಜ್ಯದ ಜವಾಬ್ದಾರಿ ನೀಡಿದರು. ನನ್ನ ಸೇವೆ ಗುರುತಿಸಿ ಮತ್ತೆ ವಿಧಾನ ಪರಿಷತ್ನಲ್ಲಿ ಅವಕಾಶ ನೀಡಿದರು. ಪಕ್ಷ ನನ್ನನ್ನು ಗುರುತಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ಸೂಚನೆಗೆ ಬದ್ಧ, ಹಾಗೆಯೇ ನಡೆದುಕೊಳ್ಳುತ್ತೇವೆ: ಗೃಹ ಸಚಿವ ಪರಮೇಶ್ವರ್ - Home Minister Parameshwar