ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಆದಷ್ಟು ಬೇಗ ನಡೆಸಲು ತಯಾರಿ ನಡೆಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಯಂತೂ ಮಾಡಲೇಬೇಕು. ಇಲ್ಲವಾದರೆ ಕೋರ್ಟ್ ಬಿಡಲ್ಲ. ನಾವು ಸಿದ್ಧರಿದ್ದೇವೆ. ವಾರ್ಡ್ ಮೀಸಲಾತಿ ಎಲ್ಲವೂ ಬಹುತೇಕ ಪೂರ್ಣವಾಗಿದೆ ಎಂದರು.
ಇನ್ನೂ ಕಣ್ಣೇ ಬಿಟ್ಟಿಲ್ಲ, ಈಗಲೇ ಟೀಕೆ ಸರಿಯಲ್ಲ: ವಿ.ಸೋಮಣ್ಣಗೆ ಜಲಶಕ್ತಿ ರಾಜ್ಯ ಖಾತೆ ಮಂತ್ರಿ ಸ್ಥಾನ ನೀಡಿರುವುದಕ್ಕೆ ತಮಿಳುನಾಡು ಆಕ್ಷೇಪಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ವಿ.ಸೋಮಣ್ಣ ಸಚಿವರಾಗಿರುವುದು ಇಡೀ ದೇಶಕ್ಕೆ. ಅವರು ಬರೀ ಒಂದು ರಾಜ್ಯಕ್ಕೆ ಸೀಮಿತವಲ್ಲ. ರಾಜ್ಯಕ್ಕೆ ಹೆಚ್ಚಿನ ಆದ್ಯತೆ ಕೊಡುವುದು ಸಹಜ. ಆದರೆ ಕಾನೂನು ಪ್ರಕಾರ ಮಾಡಿದರೆ ಮಾತ್ರ ಆಗುತ್ತದೆ. ಇಲ್ಲವಾದರೆ ಇಲ್ಲ. ನಾವು ಮಂತ್ರಿಯಾಗಿರುವಾಗ ನಮ್ಮ ಕ್ಷೇತ್ರಗಳಿಗೆ ಯೋಜನೆಗಳನ್ನು ಕೊಡುತ್ತಿದ್ದೆವು. ಇನ್ನೂ ಕಣ್ಣೇ ಬಿಟ್ಟಿಲ್ಲ. ಈಗೇಕೆ ಟೀಕೆ ಮಾಡುವುದು?. ಅವರಿಗೆ ಹೆಚ್ಚಿನ ಶಕ್ತಿ ನೀಡಲಿ. ರಾಜ್ಯದ ಹಿತ ಕಾಪಾಡಲಿ ಎಂದು ಹೇಳಿದರು.
ನಟ ದರ್ಶನ್ ಪ್ರಕರಣ- 'ಕಾನೂನು ಎಲ್ಲರಿಗೂ ಒಂದೇ': ನಟ ದರ್ಶನ್ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ನಟ ದರ್ಶನ್ ಅವರನ್ನು ಬಂಧಿಸಿರುವುದು ನನಗೆ ಗೊತ್ತಿಲ್ಲ. ಗೃಹ ಸಚಿವರಿದ್ದಾರೆ, ಅವರು ಮಾತನಾಡುತ್ತಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ಗೆ ಸರ್ಕಾರಿ ಕ್ವಾಟ್ರಸ್ ಕೊಡದ ವಿಚಾರವಾಗಿ ಪ್ರತಿಕ್ರಿಯಿಸಿ, ಕೊಡಿಸೋಣ ಎಂದರು. ಅಶೋಕ್ಗೆ ತಾವಿರುವ ಕುಮಾರ ಕೃಪಾ ಪೂರ್ವ ನಂ.1 ಸರ್ಕಾರಿ ನಿವಾಸ ಬೇಕೆಂಬ ಬೇಡಿಕೆಯ ಬಗ್ಗೆ ಮಾತನಾಡಿ, ನನಗೆ ಮುಂಚೆನೇ ಕೇಳಿದ್ದರೆ ಬಿಟ್ಟು ಕೊಡುತ್ತಿದ್ದೆ. ನನಗೆ ಹೇಳಿದ್ದರೆ ನಾನು ಅದನ್ನು ತಗೋತಾನೆ ಇರಲಿಲ್ಲ. ಈ ಮುಂಚೆ ಬಂಗಾರಪ್ಪ ಸಿಎಂ ಆಗಿದ್ದಾಗ, ಅವರ ಭೇಟಿಗೆ ಹೋಗುತ್ತಿದ್ದಾಗ ಅಲ್ಲಿರುವ ಅರಳಿ ಮರದ ಕೆಳಗೆ ಕೂರುತ್ತಿದ್ದೆ. ಅದು ನನಗೆ ನೆನಪು. ಮೂರು ವರ್ಷ ಅಲ್ಲಿ ಬಂದು ಕೂರುತ್ತಿದ್ದೆ. ಬಂಗಾರಪ್ಪನವರ ಮನೆ ಎಂದು ನಾನು ಅಲ್ಲಿಗೆ ಹೋಗಿದ್ದೇನೆ ಎಂದರು.