ಬೆಂಗಳೂರು: ''ಸುಳ್ಳು ಕೇಸ್‌ಗಳನ್ನು ಹಾಕಿದ್ದರೆ ಪರಿಶೀಲಿಸಿ ವಾಪಸ್ ಪಡೆಯಲು ಸರ್ಕಾರಕ್ಕೆ ಅವಕಾಶವಿದೆ. ಬಿಜೆಪಿ ಎಲ್ಲವನ್ನೂ ರಾಜಕೀಯ ಮಾಡಲು ಹೋಗುತ್ತಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಕೇಸ್‌ಗಳನ್ನೂ ಪರಿಶೀಲನೆ ಮಾಡುತ್ತೇವೆ'' ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಕೇಸ್‌ಗಳು ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ಪ್ರಕರಣಗಳನ್ನು ವಾಪಸ್ ಪಡೆಯಲು ಯಾರಾದರೂ ಮನವಿ ಮಾಡುತ್ತಾರೆ. ಆಗ ನಾವು ಅದರ ಪರಿಶೀಲನೆಗೆ ಸಂಪುಟ ಉಪಸಮಿತಿ ರಚಿಸುತ್ತೇವೆ. ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೇಳುತ್ತೇವೆ. ಆನಂತರ ಸಂಪುಟ ಉಪಸಮಿತಿ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ವಾಪಸ್ ತೆಗೆದಕೊಳ್ಳಬೇಕಾ, ಬೇಡವಾ ಅಂತ ಉಪಸಮಿತಿ ನಿರ್ಧರಿಸುತ್ತದೆ. ಹುಬ್ಬಳ್ಳಿ ಕೇಸ್ ಗಳನ್ನೂ ಅಷ್ಟೊಂದು ಜನರ ಮೇಲೆ ಹಾಕುವ ಅಗತ್ಯವಿಲ್ಲ ಅಂತ ಸಂಪುಟ ಉಪಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ನಂತರ ಸಂಪುಟ ಸಭೆಯಲ್ಲಿ ಪ್ರಕರಣಗಳನ್ನು ವಾಪಸ್ ಪಡೆಯುವ ನಿರ್ಧಾರ ಆಗಿದೆ'' ಎಂದು ಮಾಹಿತಿ ನೀಡಿದರು.
43 ಕೇಸ್ ವಾಪಸ್: ''ನಿರ್ಧಾರವನ್ನು ನ್ಯಾಯಾಲಯಕ್ಕೆ ಕಳಿಸುತ್ತೇವೆ, ಕೋರ್ಟ್ ಒಪ್ಪಿಕೊಂಡರೆ ಆ ಕೇಸ್‌ಗಳು ವಾಪಸ್ ಆಗುತ್ತವೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಇದ್ದಾಗಲೂ ಹಲವು ಕೇಸ್‌ಗಳನ್ನು ವಾಪಸ್ ಪಡೆದಿತ್ತು. ಯುಪಿಯಲ್ಲಿ ಅಲ್ಲಿನ ಸಿಎಂ ವಿರುದ್ಧವೇ ಹಲವು ಕೇಸ್ಗಳಿದ್ವು, ಅದನ್ನೆಲ್ಲ ಅವರು ವಾಪಸ್ ಪಡೆದುಕೊಂಡರು. ಈಗ ಹುಬ್ಬಳ್ಳಿ ಪ್ರಕರಣಗಳನ್ನು ವಾಪಸ್ ಪಡೆಯಲು ಕೋರ್ಟ್ ಒಪ್ಪುತ್ತೋ, ಇಲ್ವೋ ಗೊತ್ತಿಲ್ಲ. ನಿಯಮಾನುಸಾರ ಕೇಸ್ ವಾಪಸ್ ಪಡೆಯಬಹುದು. ಹುಬ್ಬಳ್ಳಿ ಪ್ರಕರಣಗಳಲ್ಲಿ ಒಟ್ಟು 56ರಲ್ಲಿ 43 ಕೇಸ್‌ಗಳನ್ನು ವಾಪಸ್ ಪಡೆಯುವ ತೀರ್ಮಾನವಾಗಿದೆ. ಸುಳ್ಳು ಕೇಸ್‌ಗಳನ್ನು ಹಾಕಿದ್ದರೆ ಪರಿಶೀಲಿಸಿ ವಾಪಸ್ ಪಡೆಯಲು ಸರ್ಕಾರಕ್ಕೆ ಅವಕಾಶವಿದೆ'' ಎಂದು ಗೃಹ ಸಚಿವರು ಹೇಳಿದರು.
''ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಮಾಡುತ್ತಿದ್ದೇವೆ. ಇದರಲ್ಲಿ ಕೇವಲ ಅಲ್ಪಸಂಖ್ಯಾತರಷ್ಟೇ ಇಲ್ಲ, ವಿದ್ಯಾರ್ಥಿಗಳು, ರೈತರೂ ಇದ್ದಾರೆ. ಕಣ್ಮುಚ್ಚಿಕೊಂಡು ಯಾವುದೇ ಕೇಸ್ ವಾಪಸ್ ಪಡೆಯಲ್ಲ. ನಿಯಮಾನುಸಾರ ವಾಪಸ್ ಪಡೆಯುತ್ತೇವೆ'' ಎಂದು ತಿಳಿಸಿದರು.
ರಾಜ್ಯಕ್ಕೆ ವೇಣುಗೋಪಾಲ್ ಭೇಟಿ: ನಾಳೆ ಕೆ.ಸಿ. ವೇಣುಗೋಪಾಲ್ ರಾಜ್ಯಕ್ಕೆ ಆಗಮನ ವಿಚಾರವಾಗಿ ಪ್ರತಿಕ್ರಿಯಿಸಿ, ''ನಾಳೆ ಕೇಂದ್ರದ ಪಿಎಸಿ ಕಮಿಟಿ ರಾಜ್ಯಕ್ಕೆ ಬರುತ್ತಿದೆ, ವೇಣುಗೋಪಾಲ್ ಅವರೂ ಸದಸ್ಯರು, ಹೀಗಾಗಿ ಬರುತ್ತಿದ್ದಾರೆ. ರಾಜ್ಯಕ್ಕೆ ಬಂದಾಗ ಸರ್ಕಾರ, ಪಕ್ಷದ ಕೆಲಸಗಳನ್ನು ಗಮನಿಸುತ್ತಾರೆ. ಇಲ್ಲಿ ಏನಾಗುತ್ತಿದೆ ಅಂತ ಅವರು ಸಹಜವಾಗಿ ಗಮನಿಸಲಿದ್ದಾರೆ. ನಾನು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಅಜೆಂಡಾ ಇಲ್ಲ'' ಎಂದರು.
ಸಿದ್ಧಾರ್ಥ ವಿಹಾರ ಟ್ರಸ್ಟ್‌ನಿಂದ 5 ಎಕರೆ ಸಿಎ ನಿವೇಶನ ವಾಪಸ್ ಮಾಡಿದ ವಿಚಾರವಾಗಿ ಮಾತನಾಡಿ, ''ಇಲ್ಲಿ ತಪ್ಪಾಗಿದೆ ಅಂತ ಅವರು ಭೂಮಿ ವಾಪಸ್ ಮಾಡಿಲ್ಲ. ಕಾನೂನು ಉಲ್ಲಂಘನೆ ಆಗಿರಲಿಲ್ಲ, ಆದರೂ ವಿವಾದ ಸೃಷ್ಟಿಸಲಾಗಿದೆ. ಆಪಾದನೆ ಮಾಡಿದ್ದಕ್ಕೆ ಭೂಮಿ ಬೇಡ ಅಂತ ಅವರು ವಾಪಸ್ ಮಾಡಿದ್ದಾರೆ. ಬಿಜೆಪಿಯವರಿಗೆ ಕಾಮಾಲೆ ಕಣ್ಣು, ಅವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ, ಬೇರೆ ಬಣ್ಣ ಕಾಣಲ್ಲ'' ಎಂದು ಪರಮೇಶ್ವರ್ ಟೀಕಿಸಿದರು.
ಇದನ್ನೂ ಓದಿ: ಧಾರವಾಡ ರೆಡ್ಡಿ ಸಹಕಾರ ಬ್ಯಾಂಕ್ ಶತಮಾನೋತ್ಸವ: 'ನಾನೂ ಸಹ ಸಹಕಾರ ಕ್ಷೇತ್ರದಿಂದ ಬೆಳೆದವನು': ಡಿಕೆಶಿ