ಬೆಂಗಳೂರು: ''ನಮ್ಮ ಸರ್ಕಾರ ಯಾವುದೇ ದ್ವೇಷ ರಾಜಕಾರಣ ಮಾಡಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ'' ಎಂದು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ''ನಾಗಮಂಗಲದಲ್ಲಿ ನಡೆದ ಗಲಾಟೆ ವಿಚಾರವಾಗಿ ಸುಳ್ಳು ಮಾಹಿತಿ ಹಂಚಿಕೆ ಆರೋಪದಡಿ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಮ್ಮ ಸರ್ಕಾರ ಯಾವುದೇ ದ್ವೇಷ ಕಾರಣ ಮಾಡುತ್ತಿಲ್ಲ. ಆದರೆ, ದ್ವೇಷ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ನಾವು ಕಾನೂನು ವಿರುದ್ಧವಾಗಿ ಮಾಡಿದ್ದೇವೆ ಎಂದು ಅವರು ಹೇಳುತ್ತಿರಲಿ'' ಎಂದರು.
''ನಾಗಮಂಗಲ ಗಲಾಟೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಕೆಲವರು ತಪ್ಪು ಹೇಳಿಕೆ ನೀಡಿದ್ದಾರೆ ಎಂದು ನಮ್ಮ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನು ಪುನರ್ ಪರಿಶೀಲಿಸಲಾಗುತ್ತಿದೆ'' ಎಂದು ತಿಳಿಸಿದರು.‘
ಕಾನೂನುಬಾಹಿರ ಕೆಲಸ ಮಾಡಿದ್ದರೆ ಕ್ರಮ: ಶಾಸಕ ಮುನಿರತ್ನ ಬಂಧನ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ''ಮುನಿರತ್ನ ವಿರುದ್ಧ ಮಹಿಳೆ ದೂರು ಕೊಟ್ಟ ವಿಚಾರವಾಗಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಕಾನೂನುಬಾಹಿರ ಕೆಲಸ ಮಾಡಿದ್ದರೆ, ಏನು ಕ್ರಮ ಆಗಬೇಕು ಅದು ಆಗುತ್ತದೆ'' ಎಂದು ಹೇಳಿದರು.
ಒಂದು ದೇಶ ಒಂದು ಚುನಾವಣೆ ವಿಚಾರವಾಗಿ ಮಾತನಾಡಿ, ''ಈ ವಿಷಯದ ಬಗ್ಗೆ ಇನ್ನೂ ಬಹಳಷ್ಟು ವಿವರಣೆ ಬರಬೇಕಿದೆ. ಕನಿಷ್ಠ 2/3ರಷ್ಟು ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಬೇಕಿದೆ. ಈಗ ತಾನೇ ರಾಮನಾಥ್ ಕೋವಿಂದ್ ವರದಿ ಕೊಟ್ಟಿದ್ದಾರೆ. ವರದಿಯನ್ನು ಅಧಿವೇಶನದಲ್ಲಿ ಮಂಡಿಸುತ್ತಾರೆ. ಮುಂದೇನು ಬೆಳವಣಿಗೆ ಆಗುತ್ತದೆಯೋ ನೋಡಬೇಕು. ಅದಾದ ಬಳಿಕ ರಾಜ್ಯಗಳಿಗೆ ಬಂದ ನಂತರ ಅದನ್ನು ವಿಧಾನಸಭೆಗೆ ಒಪ್ಪಿಸಬೇಕಾ? ಅಥವಾ ರಾಜ್ಯಗಳ ಒಪ್ಪಿಗೆ ಬೇಕಾ? ಎಂದು ನೋಡೋಣ'' ಎಂದರು.
ನನಗೆ ಆ ಬಗ್ಗೆ ಮಾಹಿತಿ ಇಲ್ಲ: ''ಅಧಿಕಾರಿಗಳ ವಿರುದ್ಧ ರಾಜ್ಯಪಾಲರ ವರದಿ ಏನು ಅನ್ನೋದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ನಿತ್ಯ ಒಂದಲ್ಲ ಒಂದು ರೀತಿ ದೂರುಗಳು ಬಂದಾಗ ಸರ್ಕಾರಕ್ಕೆ ಕೇಳುತ್ತಾರೆ. ಅದು ಸ್ವಾಭಾವಿಕವಾಗಿ ಮಾಹಿತಿ ಕೇಳುತ್ತಾರೆ, ಸರ್ಕಾರ ಉತ್ತರ ಕೊಡುತ್ತದೆ'' ಎಂದು ಹೇಳಿದರು.
ಸರ್ಕಾರವೇ ಕುಲಪತಿಗಳ ನೇಮಕ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ''ರಾಜ್ಯಪಾಲರ ರೋಲ್ ಏನು ಅಂತಾ ಮಾಡಿದ್ದಾರೆ. ನಾನು ಉನ್ನತ ಶಿಕ್ಷಣ ಸಚಿವನಿದ್ದೆ. ಆಗ ವಿಸಿಗಳನ್ನು ನೇಮಕ ಮಾಡುವುದನ್ನು ರಾಜ್ಯಪಾಲರಿಂದ ಮೊಟಕುಗೊಳಿಸಿದ್ದೆ. ಸರ್ಕಾರದ ತೀರ್ಮಾನ ಆಗುವ ರೀತಿಯಲ್ಲಿ ನಾನು ಮಾಡಿದ್ದೆ. ಗುಜರಾತಿನಲ್ಲಿ ಆಡಳಿತಕ್ಕೆ ಅವರು ಒಳಗಾಗುವುದಿಲ್ಲ. ಅಡಳಿತದ ದೃಷ್ಟಿಯಿಂದ ಯಾವುದು ಸುಲಭ ಅಂತ ಮಾಡಿರುತ್ತಾರೆ. ನಾವು ಒಬ್ಬರೇ ಮಾಡಿಲ್ಲ, ಬೇರೆ ಬೇರೆ ರಾಜ್ಯದಲ್ಲಿಯೂ ಮಾಡಿದ್ದಾರೆ. ಇದು ಹೊಸದೇನಲ್ಲ, 2000 ಬಿಲ್ ಪಾಸ್ ಮಾಡಿದ್ದೆವು. ಅದರ ಬಗ್ಗೆ ಚರ್ಚೆ ನಡೆಯುತ್ತಿರುತ್ತವೆ'' ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಅವರ ಟೂರ್ ಪ್ಲಾನ್ ಬಗ್ಗೆ ನನಗೆ ಗೊತ್ತಿಲ್ಲ'' ಎಂದು ಹೇಳಿದರು.
''ಡ್ರಗ್ ನಿಯಂತ್ರಣದ ವಿಚಾರಕ್ಕೆ ಸಮಿತಿ ಆಗಿದೆ, ಪಂಜಾಬ್ನಲ್ಲಿ ಹಾವಳಿ ಇತ್ತು. ನಾವು ಅನೇಕ ಸ್ಟೆಪ್ಸ್ ತೆಗೆದುಕೊಂಡಿದ್ದೇವೆ'' ಎಂದು ತಿಳಿಸಿದರು.
ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್ - One Nation One Election