ತುಮಕೂರು: ಗುಜರಾತ್ ರಾಜ್ಯದಲ್ಲಿ ರಾಜ್ಯಪಾಲರನ್ನು ಗೌರವಾನ್ವಿತ ಎಂಬುದಾಗಿರಿಸಿ, ಕುಲಸಚಿವ, ರಿಜಿಸ್ಟ್ರಾರ್ ನೇಮಕಾತಿ ಸೇರಿದಂತೆ ವಿಶ್ವವಿದ್ಯಾಲಯಗಳ ಪ್ರತಿಯೊಂದು ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿ ಸರ್ಕಾರದ ಸುಪರ್ದಿಗೆ ತೆಗೆದುಕೊಂಡರು. ಅದೇ ರೀತಿ ಗುಜರಾತ್ ಮಾಡೆಲ್ ಅನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಂಡು, ಪ್ರಸ್ತುತ ಆರ್ಡಿಪಿಆರ್ (ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್) ವಿಶ್ವವಿದ್ಯಾಲಯಕ್ಕೆ ಮುಖ್ಯಮಂತ್ರಿಗಳನ್ನು ಕುಲಪತಿಗಳನ್ನಾಗಿ ನೇಮಕ ಮಾಡಲು ತೀಮಾನ ತೆಗೆದುಕೊಳ್ಳಲಾಗಿದೆ. ಸದನದಲ್ಲಿ ಇದಕ್ಕೆ ಸಂಬಂಧಿಸಿದ ಆ್ಯಕ್ಟ್ಗಳನ್ನು ಮಂಡಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಬುಧವಾರ ಪತ್ರಕತರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಆರ್ಡಿಪಿಆರ್ ವಿವಿಯಲ್ಲಿ ಮುಖ್ಯಮಂತ್ರಿಗಳನ್ನು ಕುಲಪತಿಗಳನ್ನಾಗಿ ಮಾಡಿ ಜಾರಿಗೆ ತರಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ವಿವಿಗಳಿಗೆ ವಿಸ್ತರಿಸಬಹುದಾಗಿದೆ ಎಂದರು.
ಗುಜರಾತ್ ಮಾಡೆಲ್ ಉತ್ತಮವಾಗಿದೆ ಎಂದರೆ ಅದನ್ನು ಮಾಡಬಹುದಾಗಿದೆ. ಅಲ್ಲದೆ ನಮ್ಮ ರಾಜ್ಯವನ್ನು ಅವರು ಕೂಡ ಎಷ್ಟೊಂದು ಯೋಜನೆಗಳನ್ನು ಅನುಕರಣೆ ಮಾಡಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿವಿಯಲ್ಲಿನ ಬದಲಾವಣೆಯನ್ನು ನಾವು ಅನುಕರಿಸಿದ್ದೇವೆ. ಯಾವುದನ್ನು ವಿರೋಧಿಸಬೇಕೋ ಇಂದಿಗೂ ಅದನ್ನು ವಿರೋಧಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಸಂಪುಟ ಸಭೆಯಲ್ಲಿ 9 ವಿಧೇಯಕಗಳಿಗೆ ಅನುಮೋದನೆ: ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಮಸೂದೆ ಮಂಡನೆಗೆ ಅಸ್ತು
ರಾಜ್ಯಪಾಲರ ಅಧಿಕಾರ ಮೊಟಕು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ 9 ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ತಿದ್ದುಪಡಿ ವಿಧೇಯಕಕ್ಕೂ ಸಂಪುಟದಲ್ಲಿ ಅಸ್ತು ನೀಡಲಾಗಿದೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024 ಮಂಡನೆಗೆ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. ಈ ವಿಧೇಯಕದಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಪ್ರಸ್ತುತ ವಿವಿಯಲ್ಲಿ ರಾಜ್ಯಪಾಲರು ಕುಲಪತಿ ಆಗಿದ್ದರು. ಈ ವಿಧೇಯಕದಂತೆ ರಾಜ್ಯಪಾಲರ ಬದಲು ವಿವಿಗೆ ಸಿಎಂ ಕುಲಪತಿಗಳಾಗಲಿದ್ದಾರೆ. ಈ ವಿಶ್ವವಿದ್ಯಾಲಯದ ಎಲ್ಲಾ ನೇಮಕಾತಿ, ಆಡಳಿತಾತ್ಮಕ ಅಧಿಕಾರ ಸಿಎಂಗೆ ಇರಲಿದೆ. ಆ ಮೂಲಕ ರಾಜ್ಯಪಾಲರ ಅಧಿಕಾರ ಮೊಟಕು ಗೊಳಿಸಲಾಗಿದೆ. ಇದರಿಂದ ವಿಶ್ವವಿದ್ಯಾಲಯದ ಕಾರ್ಯವೈಖರಿ ಹೆಚ್ಚು ಸಕ್ರಿಯ ವಾಗಲಿದೆ ಹಾಗೂ ಬೇಗ ನಿರ್ಣಯ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.