ಚಾಮರಾಜನಗರ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಚಾಮರಾಜನಗರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಇನ್ನು ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಪುಟ್ಟಸಿದ್ದಿ(62), ರಾಣಿ(50) ಶವ ಪತ್ತೆಯಾಗಿದ್ದು, ಇವರ ಗ್ರಾಮ ಇನ್ನಷ್ಟೇ ತಿಳಿದು ಬರಬೇಕಿದೆ. ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ರಾಜನ್(50) ಹಾಗೂ ಇವರ ಪತ್ನಿ ರಜನಿ @ ರತ್ನಮ್ಮ(45) ಎಂಬವರ ಮನೆ ಕೊಚ್ಚಿ ಹೋಗಿದ್ದು, ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇಬ್ಬರೂ ಕೂಡ 6 ತಿಂಗಳ ಹಿಂದೆ ಕೇರಳದ ಚೂರಲ್ ಮಲೆ ಎಂಬಲ್ಲಿ ಹೊಸ ಮನೆ ಕಟ್ಟಿಕೊಂಡಿದ್ದರು. ಇವರಿಗೆ ಮಕ್ಕಳಿರಲಿಲ್ಲ ಎಂದು ತಿಳಿದು ಬಂದಿದೆ.
ಇನ್ನು, ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಗುಂಡ್ಲುಪೇಟೆ ತಾಲೂಕಿನ ತ್ರಯಂಬಕರಪುರದ ಸ್ವಾಮಿಶೆಟ್ಟಿ(70) ಎಂಬವರು ಗಾಯಗೊಂಡಿದ್ದು ವೈತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ತಂಡ ಭೂ ಕುಸಿತದ ಸ್ಥಳದಲ್ಲಿ ಬೀಡು ಬಿಟ್ಟು ಚಾಮರಾಜನಗರ ಜಿಲ್ಲೆಯ ಜನರ ಗುರುತು ಪತ್ತೆ ಮತ್ತು ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಇಂದು ನಸುಕಿನ ಜಾವ ಎರಡರಿಂದ ಮೂರು ಭೀಕರ ಭೂಕುಸಿತ ಉಂಟಾಗಿದೆ. ಇದುವರೆಗೆ ಅವಶೇಷಗಳಡಿ ಸಿಲುಕಿ ಏಳು ಮಕ್ಕಳು ಸೇರಿ 120 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಇನ್ನೂ ಹಲವು ಮಂದಿ ಸಿಕ್ಕಿಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಸಾವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 400 ಕುಟುಂಬಗಳು ತೊಂದರೆಗೊಳಗಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸುತ್ತಿವೆ.