ಶಿವಮೊಗ್ಗ: ಈ ಬಾರಿ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಆರ್ಭಟಿಸುತ್ತಿದೆ. ಹೀಗಾಗಿ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನಾಡಿನ ಪ್ರಮುಖ ಅಣೆಕಟ್ಟೆಗಳಲ್ಲೊಂದಾದ ಭದ್ರಾ ಅಣೆಕಟ್ಟೆ ಸಹ ತುಂಬಿದ್ದು, ಇಲ್ಲಿಂದ 12 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಭದ್ರಾವತಿ ತಾಲೂಕಿನ ಬಿಆರ್ಪಿಯಲ್ಲಿ ಇರುವ ಭದ್ರಾ ಅಣೆಕಟ್ಟೆ 186 ಅಡಿ ಎತ್ತರವಿದೆ. ಅಣೆಕಟ್ಟೆ ಬಹುತೇಕ ಭರ್ತಿಯಾಗಿದ್ದರಿಂದ ಮಂಗಳವಾರ ಅಧಿಕಾರಿಗಳು ನಾಲ್ಕು ಕ್ರಸ್ಟ್ ಗೇಟ್ಗಳಿಂದ 20 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಟ್ಟಿದ್ದಾರೆ. ಈ ಕುರಿತು ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಕಿರಣ್ಕುಮಾರ್ ಸ್ಥಳದ ವಸ್ತುಸ್ಥಿತಿ ಬಗ್ಗೆ ಪ್ರತ್ಯಕ್ಷ ವರದಿ ಮಾಡಿದ್ದಾರೆ.
ಮಲೆನಾಡು ಹಾಗೂ ಬಯಲು ಸೀಮೆಯ ರೈತರ ಜೀವನಾಡಿಯಾದ ಭದ್ರ ಅಣೆಕಟ್ಟು ಗರಿಷ್ಟ 186 ಅಡಿ ಎತ್ತರವಿದ್ದು, ಅಣೆಕಟ್ಟು 183 ಅಡಿ ತುಂಬುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಬಿಡಲಾಗುತ್ತದೆ. ಶಿವಮೊಗ್ಗ ತಾಲೂಕು ಕೂಡಲಿ ಎಂಬ ಜಾಗದಲ್ಲಿ ಭದ್ರೆಯು ತುಂಗಾ ನದಿಯನ್ನು ಸೇರುವ ಮೂಲಕ ತುಂಗಾಭದ್ರ ನದಿಯಾಗಿ ಹರಿಯುತ್ತದೆ. ಅಲ್ಲಿಂದ ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು ಮೂಲಕ ಕೃಷ್ಣ ನದಿಗೆ ಹೊಂದಿಕೊಂಡು ಬಂಗಾಳಕೊಲ್ಲಿಯ ಸಮುದ್ರವನ್ನು ಸೇರುತ್ತದೆ.
ಅಣೆಕಟ್ಟೆಗೆ 20 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಭದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶವಾದ ಚಿಕ್ಕಮಗಳೂರಿನ ಕಳಸ, ಹೊರನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ನದಿಗೆ ನೀರು ಬಿಡಲಾಗುತ್ತಿದೆ. ಒಳ ಹರಿವು ಹೆಚ್ಚಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ನದಿಗೆ ಬಿಟ್ಟರೆ, ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಬಹುದೆಂದು ಅಧಿಕಾರಿಗಳು ಈಗ ಕಡಿಮೆ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿದ್ದಾರೆ.
ನದಿಗೆ ಹೆಚ್ಚಿಗೆ ಪ್ರಮಾಣದಲ್ಲಿ ನೀರು ಬಿಟ್ಟರೆ, ಭದ್ರಾವತಿ, ಹೊನ್ನಾಳಿ, ಹರಿಹರ ಸೇರಿದಂತೆ ನದಿ ಪಾತ್ರದ ಭಾಗದಲ್ಲಿ ಪ್ರವಾಹ ಉಂಟಾಗುತ್ತದೆ. ಅಲ್ಲದೆ, ಇದು ಶಿವಮೊಗ್ಗ ನಗರಕ್ಕೂ ಸಹ ಸಮಸ್ಯೆಯನ್ನುಂಟು ಮಾಡುವ ಸಾಧ್ಯತೆ ಇದೆ. ಸೋಮವಾರ ನಡೆದ ಕಾಡಾ ಸಭೆಯಲ್ಲಿ ಎಡ ದಂಡೆ ಮತ್ತು ಬಲ ದಂಡೆಯ ಕಾಲುವೆಗಳಿಗೆ ಸತತ 120 ದಿನ ನೀರು ಹರಿಸಬೇಕೆಂದು ತೀರ್ಮಾನಿಸಿ, ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.
ಅಣೆಕಟ್ಟೆಯಿಂದ ನದಿಗೆ ನೀರು ಹಾಲ್ನೂರೆಯಂತೆ ಧುಮ್ಮಿಕ್ಕುತ್ತಿರುವ ದೃಶ್ಯ ನಯನ ಮನೂಹರವಾಗಿದೆ. ನದಿಗೆ ನೀರು ಬಿಡುವ ದೃಶ್ಯವನ್ನು ನೋಡಲು ಸಾಕಷ್ಟು ಸಾರ್ವಜನಿಕರು, ರೈತರು ಆಗಮಿಸಿ ಕಣ್ತುಂಬಿಕೊಂಡರು.
ಓದಿ: ಜಲಾಶಯದಿಂದ ನಿರೀಕ್ಷೆಗಿಂತ ಹೆಚ್ಚು ನೀರು ಬಿಡುಗಡೆ: ಪ್ರವಾಸಿಗರಿಗೆ ಮೇಕೆದಾಟು ಪ್ರವೇಶ ನಿಷೇಧ - Cauvery River