ಚಾಮರಾಜನಗರ: ಕೊಳ್ಳೇಗಾಲದ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ(72) ಅವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಜಯಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ನವೆಂಬರ್ 7ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯ ಕೊಳ್ಳೇಗಾಲದ ಜಯಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ನೂತನ ಮನೆಯ ನಾಮಫಲಕವನ್ನೂ ಅನಾವರಣ ಮಾಡಿದ್ದರು. ಡಿ.12ರಂದು ನೂತನ ಮನೆಯ ಗೃಹ ಪ್ರವೇಶವಿತ್ತು. ಇದಕ್ಕೂ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.
ಬುಧವಾರ ಸ್ವಗ್ರಾಮ ಮಾಂಬಳ್ಳಿಯಲ್ಲಿ ಮೃತದೇಹದ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಸಿಎಂ ಸಿದ್ದರಾಮಯ್ಯ ಸಂತಾಪ: "ಎಸ್.ಎಂ.ಕೃಷ್ಣ ಅವರ ಸಾವಿನ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಜಯಣ್ಣ ಸಾವಿನ ಸುದ್ದಿ ಆಘಾತ ತಂದಿದೆ. ಜಯಣ್ಣ ನನ್ನ ಆತ್ಮೀಯರು. ನಮ್ಮ ನಡುವೆ ದೀರ್ಘಕಾಲದ ಒಡನಾಟವಿತ್ತು. 1994ರಲ್ಲಿ ಜೆಡಿಎಸ್ನಿಂದ ಹಾಗೂ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಿದ ಜಯಣ್ಣ ಜನಾನುರಾಗಿ ಶಾಸಕರಾಗಿದ್ದರು. ಜನರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದರು. ಡಿಸೆಂಬರ್ 7ರಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜೊತೆಗಿದ್ದರು. ಅವರ ಮನೆಯಲ್ಲಿಯೇ ಊಟ ಮಾಡಿ ಬಂದಿದ್ದೆ. ಜಯಣ್ಣ ಅವರ ಸಾವು ವೈಯಕ್ತಿಕವಾಗಿ ಆಘಾತ ತಂದಿದೆ. ಅವರ ನಿಧನದಿಂದ ಜನಪ್ರಿಯ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಿಎಂ ಸಿದ್ದರಾಮಯ್ಯ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿಧಿವಶ; ನಾಳೆ ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ