ಹುಬ್ಬಳ್ಳಿ : ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ ಆಸ್ತಿ ಕಬಳಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಇಂದು ವಕ್ಪ್ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ರೈತರಿಂದ ಅಹವಾಲು ಸ್ವೀಕಾರ ಮಾಡಿದರು.
ನಗರ ಖಾಸಗಿ ಹೋಟೆಲ್ನಲ್ಲಿ ರೈತರು ಸೇರಿದಂತೆ ಹಲವು ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪಾಲ್, 70ಕ್ಕೂ ಹೆಚ್ಚು ರೈತ ನಿಯೋಗದವರು ಮನವಿ ಸಲ್ಲಿಸಿದ್ದಾರೆ. ರೈತರ, ಮಠ, ಮಂದಿರದ ಆಸ್ತಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಯಾವುದೇ ಆಡಳಿತ ವ್ಯವಸ್ಥೆ ಇಲ್ಲದೆ ಇದೆಲ್ಲ ಆಗಲು ಹೇಗೆ ಸಾಧ್ಯ?. ರಾಜ್ಯ ಸರ್ಕಾರ ಸಹ ನೋಟಿಸ್ ನೀಡಿರುವುದನ್ನು ವಾಪಸ್ ಪಡೆಯಲಾಗುವುದು ಎಂದು ಹೇಳಿದೆ. ಹುಬ್ಬಳ್ಳಿ, ವಿಜಯಪುರ, ಬೆಳಗಾವಿ, ಬೀದರ್ ಜಿಲ್ಲೆಗಳಲ್ಲಿ ಸಹ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಲಾಗಿದೆ. ಜೆಪಿಸಿ ಇದನ್ನೆಲ್ಲ ಪರಿಗಣಿಸಲಿದೆ ಎಂದು ಹೇಳಿದರು. ಸಾವಿರಕ್ಕೂ ಹೆಚ್ಚು ರೈತರು ಸಮಸ್ಯೆಗೊಳಗಾಗಿದ್ದಾರೆ. ನಾಳೆ ಭುವನೇಶ್ವರ, ಪಾಟ್ನಾಗೆ ಜೆಪಿಸಿ ತಂಡ ತೆರಳಲಿದೆ ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ವಕ್ಫ್ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ರೈತರ ಅಹವಾಲು ಸ್ವೀಕರಿಸಿದ್ದಾರೆ. 70ಕ್ಕೂ ಹೆಚ್ಚು ರೈತ ನಿಯೋಗದವರು ತಮ್ಮ ಮನವಿ ಸಲ್ಲಿಸಿದ್ದಾರೆ. ರಾಜ್ಯದ ರೈತರ ಪರವಾಗಿ ಅವರ ಸಮಸ್ಯೆ ಬಗ್ಗೆ ದೇಶದೆಲ್ಲೆಡೆ ಗಮನ ಸೆಳೆಯಲಾಗುವುದು ಎಂದರು.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೆಳಗಲ್ ಗ್ರಾಮದ ರೈತ ಮಹ್ಕದ್ ಇಸಾಖ್ ತಹಶೀಲ್ದಾರ್ ಪ್ರತಿಕ್ರಿಯೆ ನೀಡಿದ್ದು, ''ಮುಸ್ಲಿಂರ ಆಸ್ತಿಯನ್ನು ಕೂಡ ವಕ್ಫ್ ಆಸ್ತಿ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ನಾವು ಮುಸ್ಲಿಂ. ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದ ಮುಲ್ಲಾ ಆಗಿ ಕೆಲಸ ಮಾಡಿದ್ದಕ್ಕೆ ಆಗ ಪಗಾರ (ವೇತನ), ಕೂಲಿ ಇರಲಿಲ್ಲ. ಹೀಗಾಗಿ, ಆಗ ಇನಾಂ ಆಸ್ತಿ ಎಂದು ಹಿರಿಯರಿಗೆ ಆಸ್ತಿ ಕೊಟ್ಟಿದ್ದರು. ಈಗ ನಮ್ಮ ಆಸ್ತಿಯನ್ನ ವಕ್ಫ್ ಅಂತ ಹೇಳಿಕೊಂಡು ಕೆಲವರು ಬಂದು ಧ್ವಜ ಏರಿಸುವ ಮೂಲಕ ಇದು ನಮ್ಮ ಆಸ್ತಿ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ'' ಎಂದು ಆರೋಪಿಸಿದರು.
ಜೆಪಿಸಿಗೆ ದಾಖಲೆಗಳನ್ನ ಸಲ್ಲಿಸಿದ್ದೇವೆ : ಮತ್ತೋರ್ವ ಹಾನಗಲ್ ರೈತ ಚನ್ನಪ್ಪ ಬಾಳಿಕಾಯಿ ಮಾತನಾಡಿ, ''1964 ರಲ್ಲಿ ಮುಸ್ಲಿಂ ಸಮಾಜದ ಜಮೀನನ್ನು ನಮ್ಮ ಅಜ್ಜ ಖರೀದಿ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಉಳಿಮೆ ಮಾಡಿಕೊಂಡು ಬರುತ್ತಿದ್ದೇವೆ. ಆದ್ರೆ 2015 ರಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ಪಹಣಿಯಲ್ಲಿ ನಮೂದು ಮಾಡಿದ್ದಾರೆ. ಖರೀದಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾವು ಜೆಪಿಸಿಗೆ ಸಲ್ಲಿಸಿದ್ದೇವೆ'' ಎಂದು ಹೇಳಿದರು.
ಇದನ್ನೂ ಓದಿ : ವಕ್ಫ್ ಆಸ್ತಿ ವಿವಾದ: ಹುಬ್ಬಳ್ಳಿಯಲ್ಲಿ ವಕ್ಫ್ ಬೋರ್ಡ್ ಜೆಪಿಸಿ ಅಧ್ಯಕ್ಷ, ರೈತರಿಗೆ ನ್ಯಾಯ ಕೊಡಿಸುವ ಅಭಯ