ಕಾರವಾರ: ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಸಮಸ್ಯೆಯಿಂದಾಗಿ ಕಾರವಾರ ನಗರದ ಸೆಂಟ್ ಮೈಕಲ್ ಶಾಲೆಯಲ್ಲಿ ಮತದಾನ ವಿಳಂಬವಾಗಿದೆ. ಮತಗಟ್ಟೆ 107ರಲ್ಲಿ ಇವಿಎಂ ಕೆಟ್ಟುಹೋದ ಕಾರಣ ಒಂದು ಗಂಟೆಯಿಂದ ಮತದಾನ ಆರಂಭವಾಗದೇ ನೂರಾರು ಜನರು ಸರತಿ ಸಾಲಿನಲ್ಲಿ ಕಾದು ನಿಲ್ಲುವಂತಾಗಿದೆ.
ವಯೋವೃದ್ಧರು, ಕಾಲು ಗಾಯಗೊಂಡು ಬ್ಯಾಂಡೇಜ್ ಹಾಕಿಸಿಕೊಂಡವರೂ ಸೇರಿದಂತೆ ಬೆಳಗ್ಗೆ 6.45ರಿಂದಲೇ ಜನರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು. ಈ ಬಗ್ಗೆ ಚುನಾವಣಾ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕೆಲಸಕ್ಕೆ ಹೋಗುವವರೂ ಸೇರಿದಂತೆ ಹಲವರು ಕಾಯುತ್ತಿದ್ದು, ಮತದಾನ ಆರಂಭವಾಗದ ಕಾರಣಕ್ಕೆ ಚುನಾವಣಾ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗ: ನಗರದ ದುರ್ಗಿಗುಡಿ ಶಾಲೆಯ ಬೂತ್ ನಂ.120ರಲ್ಲಿ ಮತಯಂತ್ರ ಕೈಕೊಟ್ಟಿತ್ತು. ನಂತರ ಸುಮಾರು ಅರ್ಧ ಗಂಟೆ ತಡವಾಗಿ ಮತದಾನ ಪ್ರಾರಂಭವಾಯಿತು.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಮತದಾರರ ಸೆಳೆಯಲು ವಿಶೇಷ ಮತಗಟ್ಟೆಗಳ ಸ್ಥಾಪನೆ - Special Polling Booths
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ವಿವಿಧ ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿದೆ. ನಾಲ್ಕು ಕಡೆ ಮತಯಂತ್ರಗಳು ಕೈಕೊಟ್ಟಿವೆ. ಎಪಿಎಂಸಿ ಆಡಳಿತ ಭವನದ ಕ್ರಮಸಂಖ್ಯೆ 110ರ ಮತಗಟ್ಟೆ, ಮತಗಟ್ಟೆ ಸಂಖ್ಯೆ 99, 107, 112ರಲ್ಲಿನ ವಿವಿಪ್ಯಾಟ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿವೆ. ಮತಯಂತ್ರ ಕೈಕೊಟ್ಟ ಹಿನ್ನೆಲೆ ಮತದಾರರು ಕಾದು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಮತಯಂತ್ರ ಪರಿಶೀಲಿಸುತ್ತಿದ್ದಾರೆ.