ಶಿವಮೊಗ್ಗ: ''ನಾಳೆ ನೀವು ಪ್ರಶ್ನಿಸಲು ಇಂದು ತಪ್ಪದೇ ಎಲ್ಲರೂ ಮತದಾನ ಮಾಡಬೇಕು'' ಎಂದು ನಟ ಶಿವರಾಜ್ ಕುಮಾರ್ ಕರೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ತನ್ನ ಪತ್ನಿ ಗೀತ ಶಿವರಾಜ್ ಕುಮಾರ್ ಅವರ ಜೊತೆ ಮತಯಾಚನೆಗೆ ಆಗಮಿಸಿ, ವಕೀಲರ ಭವನದಲ್ಲಿ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಅವರು, ''ಎಲ್ಲರೂ ಮತದಾನ ಮಾಡಬೇಕು. ನಾನು ಈಗ ಬೆಂಗಳೂರಿಗೆ ಹೋಗಿ ಮತದಾನ ಮಾಡಲಿದ್ದೇವೆ. ನಮ್ಮ ತಂದೆ ಹೇಳುತ್ತಿದ್ದರು, ಎಲ್ಲರೂ ಮತದಾನ ಮಾಡಬೇಕು ಎನ್ನುತ್ತಿದ್ದರು. ಮತದಾನ ನಮ್ಮ ಹಕ್ಕು ಅದನ್ನು ಎಲ್ಲರೂ ಚಲಾಯಿಸಬೇಕು. ಇಂದು ಮತದಾನ ಮಾಡಿ ನಾಳೆ ನಮ್ಮ ಹಕ್ಕನ್ನು ಕೇಳಬಹುದು. ಈ ಹಕ್ಕು ಸಿಗುವುದು ನಾವು ಮತದಾನ ಮಾಡಿದಾಗಲೇ'' ಎಂದು ಅವರು ಹೇಳಿದರು.
''ಮತದಾನ ಮಾಡುವುದನ್ನು ಯಾರು ಮಿಸ್ ಮಾಡಬೇಡಿ. ಎಲ್ಲರೂ ಮತದಾನ ಮಾಡಿ. ನಾನು ಪತ್ನಿ ಧರ್ಮಕ್ಕಾಗಿ ಮತ ಕೇಳಲು ಬಂದಿದ್ದೇನೆ. ಇಂದು ನಾನು ಶಿವಮೊಗ್ಗದ ಜಿಲ್ಲಾ ಕೋರ್ಟ್ನಲ್ಲಿ ವಕೀಲರ ಮತ ಕೇಳಲು ಬಂದಿದ್ದೇವೆ. ನಾನು ನನ್ನ ಪತ್ನಿ ಪರವಾಗಿ, ಮತ ಕೇಳಲು ಬಂದಿದ್ದೇನೆ. ಎಲ್ಲ ವಕೀಲರು ಪ್ರೀತಿ ತೋರಿಸಿದರು. ಸ್ನೇಹ ಪರಸ್ಪರ ಇರುತ್ತದೆ. ಇಲ್ಲಿಗೆ ಬಂದು ನಾನು ನನ್ನ ಪತ್ನಿಗೆ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆ. ಅವರು ಉತ್ತಮವಾಗಿ ಸ್ಪಂದಿಸಿದರು'' ಎಂದರು.
''ಎಲ್ಲ ಕಡೆ ವಾತಾವರಣ ತುಂಬಾ ಚೆನ್ನಾಗಿದೆ. ಕಳೆದ 10 ವರ್ಷಗಳ ಹಿಂದೆಗಿಂತ ಈಗ ಉತ್ತಮವಾದ ಸ್ಪಂದನೆ ಸಿಗುತ್ತಿದೆ. ಜನರು ನಮ್ಮನ್ನು ನೋಡಿ ಕಣ್ಣೀರು ಹಾಕಿ ಪ್ರೀತಿ ತೋರಿಸುತ್ತಿದ್ದಾರೆ. ನಮ್ಮ ಹೃದಯಕ್ಕೆ ಮುಟ್ಟಿದೆ. ಇದೇ ಬದಲಾವಣೆಗೆ ಕಾರಣವಾಗಲಿದೆ. ಅವರ ಭಾವನೆ ನಮಗೆ ಅನುಕೂಲವಾಗಲಿ'' ಎಂದು ಹೇಳಿದರು.
ನಂತರ ಮಾತನಾಡಿದ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್, ''ನಾವು ಈಗ ಬೆಂಗಳೂರಿಗೆ ಹೋಗಿ ಮತದಾನ ಮಾಡುತ್ತೇವೆ. ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಜನ ಬೆಂಬಲಿಸುತ್ತಿದ್ದಾರೆ. ಇದೇ ಕೋರ್ಟ್ಗೆ ನಮ್ಮ ತಂದೆ ಸೈಕಲ್ ಓಡಿಸಿಕೊಂಡು ಬಂದು ವಕೀಲ ವೃತ್ತಿ ಮಾಡಿದ್ದರು. ಇಲ್ಲಿನ ವಕೀಲರು ಕೋಟ್ ಹಾಕಿರುವುದನ್ನು ನೋಡಿ ನಮ್ಮ ತಂದೆಯೇ ಎದುರಿಗೆ ಬಂದಂತೆ ಅನುಭವವಾಗುತ್ತದೆ. ಇಲ್ಲಿಗೆ ಬರಬೇಕು ಎಂದಾಗ ನನಗೆ ರಾತ್ರಿಯಿಂದ ಅದೇ ಮನಸ್ಸಿನಲ್ಲಿ ಕಾಡುತ್ತಿತ್ತು. ಇಲ್ಲಿ ಮತ ಕೇಳಲು ಬಂದಿದ್ದೇವೆ'' ಎಂದು ತಿಳಿಸಿದರು.
ಈ ವೇಳೆ, ಸಚಿವ ಮಧು ಬಂಗಾರಪ್ಪ ಸೇರಿದಂತೆ ಅನೇಕ ವಕೀಲರು ಇದ್ದರು.
ಇದನ್ನೂ ಓದಿ: ಚಿತ್ರದುರ್ಗ: ಮಾಂಗಲ್ಯ ಧಾರಣೆ ಬಳಿಕ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ವಧು - ವರ - new married couple voting