ಶಿವಮೊಗ್ಗ: ಹೆಚ್.ಡಿ ಕುಮಾರಸ್ವಾಮಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವರಾದ ಮೇಲೆ ಭದ್ರಾವತಿಯ ವಿಐಎಸ್ಎಲ್ ಖಾಯಂ ಹಾಗೂ ಗುತ್ತಿಗೆ ನೌಕರರಲ್ಲಿ ಆಶಾಕಿರಣ ಮೂಡಿದಂತೆ ಆಗಿದೆ.
ನಷ್ಟದ ಕಾರಣ ನೀಡಿ ಕೇಂದ್ರದ ನೀತಿ ಆಯೋಗವು ವಿಶ್ವಶ್ವೇರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಮುಚ್ಚುವ ಆದೇಶ ಮಾಡಿತ್ತು. ನಂತರ ಖಾಸಗೀಕರಣಕ್ಕೆ ಅವಕಾಶ ನೀಡಿತ್ತು. ಅದರೆ ಸಂಸದ ಬಿ.ವೈ ರಾಘವೇಂದ್ರ ಸತತ ಶ್ರಮದಿಂದ ಒಂದು ವರ್ಷದ ಅವಧಿಗೆ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಲು ಬಂಡವಾಳ ಹೊಡಿಕೆ ಮಾಡಿಸಿದ್ದಾರೆ. ಆದರೆ, ಕಾರ್ಖಾನೆಯ ಮೇಲೆ ತೂಗುಗತ್ತಿ ಇದ್ದೇ ಇದೆ.
ಇದೀಗ ಕಾರ್ಖಾನೆಯನ್ನು ಮುಚ್ಚದೆ, ಬಂಡವಾಳವನ್ನು ಹೂಡಿಕೆ ಮಾಡಿ ಕಾರ್ಖಾನೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಕಾರ್ಮಿಕರು ಹಾಗೂ ಭದ್ರಾವತಿ ಜನರ ಒತ್ತಾಯಿಸುತ್ತಿದ್ದಾರೆ. ಈಗ ಕೇಂದ್ರದಲ್ಲಿ ಕನ್ನಡಿಗರೇ ಆದ ಹೆಚ್ಡಿ ಕುಮಾರಸ್ವಾಮಿ ಅವರು ಉಕ್ಕು ಮತ್ತು ಬೃಹತ್ ಕೈಗಾರಿಕ ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು, ಕಾರ್ಖಾನೆಯನ್ನು ಉಳಿಸಿ ತಮಗೆ ನೆರವಾಗುತ್ತಾರೆ ಎಂಬ ಆಶಾಭಾವನೆ ಕಾರ್ಮಿಕರಲ್ಲಿ ಮೂಡಿದೆ.
ಅಂದು ಹೆಚ್ಡಿ ದೇವೇಗೌಡ್ರು ಇಂದು ಹೆಚ್ಡಿ ಕುಮಾರಸ್ವಾಮಿ: ವಿಐಎಸ್ಎಲ್ ಕಾರ್ಖಾನೆಯು ರಾಜ್ಯ ಸರ್ಕಾರದ ಸ್ವಾಧಿನದಲ್ಲಿತ್ತು. ಆದರೆ ಕಾರ್ಖಾನೆಯು ನಷ್ಟಕ್ಕೆ ಒಳಗಾಗುತ್ತಿದ್ದಾಗ ಇದನ್ನು ಕೇಂದ್ರ ಸರ್ಕಾರ ಸೇಲ್ಗೆ ವಹಿಸಿ ಕೊಟ್ಟಿತ್ತು. 1989ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಕಾರ್ಖಾನೆಯನ್ನು ಕೇಂದ್ರಕ್ಕೆ ವಹಿಸಿಕೊಟ್ಡಿದ್ದರು. ಈಗ ತೀವ್ರ ಸಂಕಷ್ಟದಲ್ಲಿ ಇರುವ ಕಾರ್ಖಾನೆಯನ್ನು ಉಳಿಸುವ ಅವಕಾಶ ಕನ್ನಡಿಗರೇ ಆದ ಕುಮಾರಸ್ವಾಮಿ ಅವರಿಗೆ ಒದಗಿಬಂದಿದೆ. ಇದರಿಂದ ವಿಐಎಸ್ಎಲ್ ಬಗ್ಗೆ ಆಸಕ್ತಿ ವಹಿಸಿ ಕಾರ್ಖಾನೆಯನ್ನು ಉಳಿಸಬೇಕು ಎಂಬುದು ಕಾರ್ಮಿಕರ ಒತ್ತಾಯವಾಗಿದೆ.
ಇದಕ್ಕಾಗಿ ವಿಐಎಸ್ಎಲ್ ಕಾರ್ಮಿಕರ ಸಂಘವು ಮುಂದಿನ ವಾರ ಸಂಸದ ಬಿ.ವೈ ರಾಘವೇಂದ್ರ ಅವರ ನೇತೃತ್ವದಲ್ಲಿ ಕೇಂದ್ರ ಸಚಿವರಾದ ಕುಮಾರಸ್ವಾಮಿಯನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಅವರ ಮುಂದಿಡಲಿದ್ದಾರೆ.
ಈ ಬಗ್ಗೆ ವಿಐಎಸ್ಎಲ್ ಕಾರ್ಮಿಕ ಜಗದೀಶ್ ಈಟಿವಿ ಭಾರತದ ಜೊತೆ ಮಾತನಾಡಿ, ಕೇಂದ್ರದಲ್ಲಿ ಉಕ್ಕು ಸಚಿವರಾಗಿ ಆಯ್ಕೆಯಾದ ಕುಮಾರಸ್ವಾಮಿ ಅವರಿಗೆ ನಮ್ಮ ಭದ್ರಾವತಿಯ ವಿಐಎಸ್ಎಲ್ ಸಮಸ್ಯೆಯ ಬಗ್ಗೆ ತಿಳಿದಿದೆ. ಅವರು ಕೇಂದ್ರ ಸಚಿವರಾಗಿದ್ದು, ನಮಗೆಲ್ಲಾ ಸಂತೋಷವನ್ನುಂಟು ಮಾಡಿದೆ. ಈ ಕಾರ್ಖಾನೆಗೆ 1 ಲಕ್ಷ ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡಬೇಕಿದೆ. ತನ್ನ ಇತರೆ ಪ್ಲಾಂಟ್ಗಳಿಗೆ ಬ್ರೌನ್ ಹಾಗೂ ಗ್ರೀನ್ ಫೀಲ್ಡ್ ಪ್ರಾಜೆಕ್ಟ್ಗೆ ಹಣ ಮಂಜೂರು ಆಗಿದೆ. ವಿಐಎಸ್ಎಲ್ನಲ್ಲಿ 1600 ಎಕರೆ ಭೂಮಿ ಇದೆ ಹಾಗೂ 1500 ಎಕರೆ ಗಣಿ ಮಂಜೂರು ಆಗಿದೆ. ಇಲ್ಲಿ 2 ಮಿಲಿಯನ್ ಟನ್ ಉತ್ಪಾದನ ಘಟಕ ಸ್ಥಾಪನೆಗೆ ಅವಕಾಶವಿದೆ. ಇದರಿಂದ ಸುಮಾರು 15-20 ಸಾವಿರ ಕೋಟಿ ರೂ. ಬಂಡವಾಳ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಮಿಕರ ಕಣ್ಣೀರು; ಕಾರ್ಖಾನೆಯ ಸಾವಿರಾರು ಕಾರ್ಮಿಕರು ಕಳೆದ 4 ದಶಕಗಳಿಂದ ಕಣ್ಣೀರಿನಲ್ಲೇ ಕೈತೊಳೆಯುವಂತಾಗಿದೆ. ಈ ಸಮಸ್ಯೆ ಕೊನೆಗೊಳ್ಳಬೇಕು. ಕಾರ್ಖಾನೆಯಲ್ಲಿ ಸದ್ಯ 193 ಕಾರ್ಮಿಕರು ಇದ್ದಾರೆ. ಈಗ ಕಾರ್ಖಾನೆಯಲ್ಲಿನ ಯಂತ್ರೋಪಕರಣಗಳು ಶಿಥಿಲವಸ್ಥೆಯಲ್ಲಿದೆ. ಮಳೆ ಬಂದ್ರೆ ಸೋರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗ ಖಾಯಂ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಹೊಸ ನೇಮಕಾತಿ ಪ್ರಾರಂಭ ಮಾಡಬೇಕು. ಗುತ್ತಿಗೆ ಕಾರ್ಮಿಕರಿಗೆ ಕೈ ತುಂಬ ಕೆಲಸ ಸಿಗಬೇಕಿದೆ. ಸೇಲ್ ಆಡಳಿತ ಮಂಡಳಿಯು ವಿಐಎಸ್ಎಲ್ಗೆ ಭೇಟಿ ನೀಡಿ ವರದಿ ತಯಾರಿಸಿ ನಂತರ ಅದರ ರೂಪರೇಷೆಯನ್ನು ತಯಾರು ಮಾಡಬೇಕಂದು ಅಗ್ರಹಿಸಿದ್ದಾರೆ. ಕುಮಾರ ಸ್ವಾಮಿ ಅವರ ತಂದೆ ದೇವೆಗೌಡರು ಈ ಕಾರ್ಖಾನೆಯನ್ನು ಸೇಲ್ಗೆ ಕೊಟ್ಟಿದ್ದರು. ಈಗ ಕಾರ್ಖಾನೆ ಉಳಿವಿಗಾಗಿ ಕುಮಾರಸ್ವಾಮಿ ಕ್ರಮ ತೆಗೆದುಕೊಳ್ಳಬೇಕೆಂದಿದ್ದಾರೆ.
ಇದೇ ವೇಳೆ ಮಾತನಾಡಿದ ಕಾರ್ಮಿಕ ಸಂಘದ ಕಾರ್ಯದರ್ಶಿ ಬಸಂತ್ ಕುಮಾರ್, ಬದುಕಿನ ಭರವಸೆಯನ್ನು ಕಳೆದುಕೊಂಡ ನಮಗೆ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾಗಿದ್ದು ಹರ್ಷವನ್ನುಂಟು ಮಾಡಿದೆ. 2016 ರಿಂದ ಕಾರ್ಖಾನೆಯು ನಷ್ಟದಲ್ಲಿದೆ ಎಂದು ಕಾರ್ಖಾನೆ ಖಾಸಗೀಕರಣ ಹಾಗೂ ಮಾರಾಟಕ್ಕೆ ಮುಂದಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಕಾರ್ಮಿಕರ ಬದುಕು ದುಸ್ಥರವಾಗಿದೆ. ನಾವು ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಆಗದ ಪರಿಸ್ಥಿಯಲ್ಲಿದೆ. ಆದರೆ ಇಲ್ಲಿನ ಸಮಸ್ಯೆಯಿಂದ ಹೊರಬರಬೇಕಾದರೆ ಅದು ನಮ್ಮ ಸಂಸದರಿಂದ ಮಾತ್ರ ಸಾಧ್ಯವಾಯಿತು. ಇದರಿಂದ ಇನ್ಮುಂದೆ ನಮ್ಮ ಕಾರ್ಖಾನೆಯು ಉತ್ತಮ ಸ್ಥಿತಿಯತ್ತ ಹೋಗಬಹುದೆಂಬ ಆಶಾ ಭಾವನೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇವಿ ಉತ್ಪಾದನಾ ಘಟಕ ಸ್ಥಾಪನೆ: ಸ್ಥಳ ಪರಿಶೀಲನೆಗಾಗಿ ಭಾರತಕ್ಕೆ ಆಗಮಿಸಲಿದೆ ಟೆಸ್ಲಾ ತಂಡ - TESLA