ದಾವಣಗೆರೆ: ಸಂತೆಯಲ್ಲಿ ಆಗುವ ವ್ಯಾಪಾರ ವಹಿವಾಟು, ವಾರದ ಸಂತೆಯಲ್ಲಿ ಮಾರಾಟವಾಗುವ ಸರಕುಗಳು, ತೂಕ ಮತ್ತು ಆಳತೆ, ಮಾರುಗಳ ಲೆಕ್ಕ, ಡಜನ್, ಸೇರು, ಪಾವು, ಅಚ್ಚೇರುಗಳ ಪರಿಚಯ ಮತ್ತು ವ್ಯಾಪಾರ ಹಾಗೂ ಡಿಜಿಟಲ್ ಪೇಮೆಂಟ್ (ನಗದುರಹಿತ ವ್ಯವಹಾರ) ವಹಿವಾಟಿನ ಕುರಿತು ಪ್ರಾಯೋಗಿಕ ತಿಳಿಸಿಕೊಡುವ ಸಲುವಾಗಿ ನಗರದ ವಿರಕ್ತಮಠದ ಎಸ್‌ಜೆಎಂ ಶಾಲೆಯಲ್ಲಿ ಮಕ್ಕಳಿಗಾಗಿ ಎಸ್‌ಜೆಎಂ ಸಂತೆ ಆಯೋಜಿಸಲಾಗಿತ್ತು.
ಎಸ್‌ಜೆಎಂ ಸಂತೆ ಎಂಬ ವಿಶೇಷ ಕಾರ್ಯಕ್ರಮವನ್ನು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಮಕ್ಕಳ ಸಂತೆಯಲ್ಲಿ ತಾಜಾ ತರಕಾರಿಗಳು, ಸೊಪ್ಪು, ಹಣ್ಣುಗಳು, ದಿನಸಿ ವಸ್ತು ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ಸುಮಾರು 50ಕ್ಕೂ ಹೆಚ್ಚು ಮಕ್ಕಳು ಅತ್ಯಂತ ಉತ್ಸಾಹದಿಂದ ಮಾರಾಟ ಮಾಡುವಲ್ಲಿ ನಿರತರಾಗಿದ್ದು ಕಂಡುಬಂದಿತು. ಈ ಮೂಲಕ ಮಕ್ಕಳು ವ್ಯಾಪಾರದ ಅನುಭವ ಪಡೆದರು. ಪೋಷಕರು, ಸಾರ್ವಜನಿಕರು ಮಕ್ಕಳ ಸಂತೆಗೆ ಆಗಮಿಸಿ ತರಕಾರಿ, ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಹುರಿದುಂಬಿಸಿದರು. ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸ್ವತಃ ತರಕಾರಿ, ಹೂವು ಖರೀದಿಸಲು ಮಕ್ಕಳೊಂದಿಗೆ ವ್ಯವಹರಿಸಿದರು.
ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, "ನಮ್ಮ ಎಸ್‌ಜೆಎಂ ಶಾಲೆಯಲ್ಲಿ ಮಕ್ಕಳ ಸಂತೆ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ತರಕಾರಿಗಳು, ಸೊಪ್ಪು, ಹಣ್ಣುಗಳು, ದಿನಸಿ ವಸ್ತು ಮಾರಾಟ ಮಾಡುವ ವಿಧಾನವನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡುವ ಕೆಲಸವನ್ನು ಶಾಲೆಯ ಶಿಕ್ಷಕರು ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ರೋಷನ್ ಜಮೀರ್, ಶಿಕ್ಷಕರಾದ ಫಾರೂಖ್, ಜಗದೀಶ್, ಸಿದ್ದಲಿಂಗಸ್ವಾಮಿ, ಪ್ರದೀಪ್ ಇತರರು ಉಪಸ್ಥಿತರಿದ್ದರು.