ಉಡುಪಿ: ಕಳೆದ ಕೆಲ ದಿನಗಳಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಆರ್ಭಟ ಜೋರಾಗಿದೆ. ಇದರಿಂದಾಗಿ ಸ್ಥಳೀಯ ಜನರು, ವಿದ್ಯಾರ್ಥಿಗಳಿಗೆ ಸಂಚಾರ ಸೇರಿದಂತೆ ಹಲವು ಸಮಸ್ಯೆಗಳುನ ಎದುರಾಗಿವೆ.
ಮೂಲಭೂತ ಸೌಕರ್ಯಗಳ ಕೊರತೆ; ಇತ್ತು ಜಿಲ್ಲೆಯ ಬೈಂದೂರು ಸಮೀಪದ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಳಜಿತ್ ಗ್ರಾಮದ ಹುಲ್ಕಡ್ಕಿ ಗುಡಿಕೇರಿ ಎಂಬಲ್ಲಿ ಸೇತುವೆ ಇಲ್ಲದ ಕಾರಣದಿಂದ ಶಾಲೆಗೆ ಹೋಗುವ ಮಕ್ಕಳನ್ನು ಪೋಷಕರೇ ಎತ್ತಿಕೊಂಡು ಹೊಳೆ ದಾಟುವ ಪರಿಸ್ಥಿತಿ ಎದುರಾಗಿದೆ. ಬೆಟ್ಟಗುಡ್ಡಗಳಿಂದ ಆವೃತವಾದ ಬೈಂದೂರು ತಾಲೂಕಿನ ಜನ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲಿನ ಜನ ಮಳೆಗಾಲದಲ್ಲಿ ಅನುಭವಿಸುವ ಪಾಡು ಹೇಳ ತೀರದ್ದು, ಅದರಲ್ಲೂ ಮಕ್ಕಳು ಅಪಾಯಕಾರಿ ಕಾಲುಸಂಕ ಅಥವಾ ಹೊಳೆ ದಾಟಿ ಶಾಲೆಗೆ ಹೋಗುವ ಪರಿಸ್ಥಿತಿ ಇದೆ.
ವಿಶೇಷಚೇತನ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಶಾಸಕರು: ಗುಡಿಕೇರಿಯಲ್ಲಿ ವಾಸಿಸುತ್ತಿರುವ ಕುಟುಂಬವೊಂದರ ಇಬ್ಬರು ವಿಶೇಷ ಚೇತನ ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಗೆ ಹೋಗಲು ಮಾರ್ಗ ಮಧ್ಯೆ ಇರುವ ಹೊಳೆಯಿಂದ ಸಮಸ್ಯೆ ಎದುರಾಗುತ್ತಿದೆ. ಇಲ್ಲಿ ಸಂಕ ಇಲ್ಲದ ಕಾರಣ ಹೊಳೆ ದಾಟಿಸಲು ಮಕ್ಕಳ ಪೋಷಕರೇ ಬರಬೇಕು. ಜೋರು ಮಳೆ ಬಂದರೆ ಪೋಷಕರಿಲ್ಲದೇ ಮಕ್ಕಳು ಶಾಲೆಗೆ ಹೋಗಲು ಬಹಳ ಕಷ್ಟ ಪಡಬೇಕಾಗುತ್ತದೆ. ಈ ವಿಷಯ ತಿಳಿಯುತ್ತಿದ್ದಂತೆ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಸ್ಥಳಕ್ಕೆ ಧಾವಿಸಿ, ಮಕ್ಕಳನ್ನು, ಪೋಷಕರನ್ನು ಭೇಟಿ ಮಾಡಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.
ಶೀಘ್ರದಲ್ಲೇ ಕಾಲುಸಂಕ ನಿರ್ಮಿಸುವ ಭರವಸೆ; ಬಳಿಕ ಮಾತನಾಡಿದ ಅವರು, "ಸರಿಯಾದ ಕಾಲುಸಂಕ ವ್ಯವಸ್ಥೆ ಇಲ್ಲದೆ ಕ್ಷೇತ್ರದ ಕೆಲವು ಭಾಗದಲ್ಲಿ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ತುರ್ತಾಗಿ ಅಲ್ಲೆಲ್ಲ ಏನು ಮಾಡಬೇಕು ಎಂಬುದನ್ನು ಕಾರ್ಯಕರ್ತರಿಗೆ ನಿರ್ದೇಶನಗಳನ್ನು ನೀಡಲಾಗಿದೆ. ತಾತ್ಕಾಲಿಕ ನೆಲೆಯಲ್ಲೇ ಏನೆಲ್ಲ ಪರಿಹಾರ ಕಾರ್ಯ ಸೂಚಿಸಲು ಸಾಧ್ಯವೋ ಅದನ್ನು ತುರ್ತಾಗಿ ಮಾಡುತ್ತಿದ್ದೇವೆ. ಶಾಶ್ವತ ವ್ಯವಸ್ಥೆಯನ್ನು (ಕಾಲುಸಂಕ) ರೂಪಿಸಲು ಯೋಜನೆ ಸಿದ್ಧಪಡಿಸಲಾಗುವುದು. ಇದು ಸಾಧ್ಯವಾಗದೇ ಇದ್ದಲ್ಲಿ ಸ್ವತಃ ತಮ್ಮ ಮನೆಗೇ ಬಂದು ವಾಸಿಸಬಹುದು ಎಂದು ಶಾಸಕರು ಮಕ್ಕಳಿಗೆ ಧೈರ್ಯ ತುಂಬಿದರು ಮತ್ತು ಯಾವುದೇ ಕಾರಣಕ್ಕೂ ಶಿಕ್ಷಣ ನಿಲ್ಲಿಸಬಾರದು. ಈ ಭಾಗದಲ್ಲಿ ಶೀಘ್ರದಲ್ಲೇ ಕಾಲು ಸಂಕ ನಿರ್ಮಿಸುವುದರೊಂದಿಗೆ, ಆ ಮಕ್ಕಳ ಆರೋಗ್ಯದ ಬಗ್ಗೆಯೂ ಮುಂದಿನ ದಿನಗಳಲ್ಲಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು" ಎಂದು ಅಭಯ ನೀಡಿದರು.
ಇದನ್ನೂ ಓದಿ: ಉತ್ತರ ಕನ್ನಡ: ಕಡಲ್ಕೊರೆತಕ್ಕೆ ತಡೆ ಕಲ್ಲುಗಳು, ತೆಂಗಿನ ಮರ, ಮೀನುಗಾರರ ಶೆಡ್ ಸಮುದ್ರಪಾಲು - Coastal Erosion