ಬೆಂಗಳೂರು: ವಾಲ್ಮೀಕಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್ ನೋಟ್‌ನಲ್ಲಿ ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್ ಹೆಸರು ಉಲ್ಲೇಖಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸದನದಿಂದ ಹೊರಬಂದು ಪೋಸ್ಟರ್ ಪ್ರದರ್ಶಿಸಿ ಬಿಜೆಪಿ ಸದಸ್ಯರು ಗುರುವಾರ ಧಿಕ್ಕಾರ ಕೂಗಿದರು.
ಸದನ ಮುಂದೂಡಿದ ಬಳಿಕ ಹೊರಬಂದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದಲಿತರ ಹೆಸರಿನಲ್ಲಿ ಹಣ ನುಂಗಿದರಣ್ಣ ಸಿದ್ದರಾಮಣ್ಣ, ಡೆತ್‌ನೋಟ್ ಪತ್ರದಲ್ಲಿ ಆರೋಪಿಗಳ ಹೆಸರನ್ನು ಬಿಟ್ಟಿರಣ್ಣ ಸಿದ್ದರಾಮಣ್ಣ ಎಂದು ಭಿತ್ತಿಪತ್ರ ಹಿಡಿದು ಆಕ್ರೋಶ ಹೊರಹಾಕಿದರು.
ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, ವಾಲ್ಮೀಕಿ ಹಗರಣ ಸಂಬಂಧ ಸಿಎಂ ಉತ್ತರಿಸುವಾಗ ಡೆತ್ನೋಟ್ನಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಶಾಸಕರ ಹೆಸರನ್ನು ಉಲ್ಲೇಖಿಸಿಲ್ಲ. ಈ ಮೂಲಕ ಅಧಿವೇಶನವನ್ನು ತಪ್ಪು ದಾರಿಗೆಳೆದಿದ್ದಾರೆ. ಡೆತ್ನೋಟ್ನಲ್ಲಿ ಹಾಗೂ ಎಫ್ಐಆರ್ನಲ್ಲಿ ಮಂತ್ರಿಗಳ ಹೆಸರಿದ್ದರೂ ತಮಗೆ ಅನುಕೂಲವಾಗುವ ರೀತಿಯಲ್ಲಿ ಉತ್ತರಿಸಿದ್ದಾರೆ ಎಂದರು.
ರಾಜ್ಯದಲ್ಲಿ ಎಸ್ಎಸ್ಎಸ್ ತಂಡ: ರಾಜ್ಯದಲ್ಲಿ ಸಿದ್ದರಾಮಯ್ಯ, ಸುರ್ಜೆವಾಲಾ ಹಾಗೂ ಶಿವಕುಮಾರ್ ಒಳಗೊಂಡ ಎಸ್ಎಸ್ಎಸ್ ಟೀಮ್ ಇದೆ. ಚುನಾವಣೆ ವೇಳೆ ಮತದಾರರಿಗೆ ಹಂಚಲು ಸರ್ಕಾರದ ಹಣ ವರ್ಗಾವಣೆ ಆಗಿದೆ. ಸಿದ್ದರಾಮಯ್ಯ ಮಾತಾಡಿರುವ ಹೇಳಿಕೆಯಲ್ಲಿ ಬರೀ 5 ನಿಮಿಷ ಮಾತ್ರವೇ ವಾಲ್ಮೀಕಿ ಅವ್ಯವಹಾರದ ಬಗ್ಗೆ ಮಾತಾಡಿದ್ದಾರೆ. ಇಡಿ ತನಿಖೆಯಲ್ಲಿ ಚುನಾವಣೆಗಾಗಿ ಹಣ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದು ದಲಿತರ ದುಡ್ಡು, ದಲಿತರಿಗೆ ತಲುಪಿಸುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ವಾಲ್ಮೀಕಿ ಹಗರಣ ಸಂಬಂಧ ಪ್ರತಿನಿತ್ಯ ಹೊಸ ಹೊಸ ವಿಚಾರ ಬೆಳಕಿಗೆ ಬರುತ್ತಿವೆ. ರಾಜ್ಯದ ಹಣ ಲೂಟಿ ಮಾಡಿದ್ದಾರೆ. ನಿಗಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿಕೊಂಡಿದ್ದಾರೆ. ಸಿದ್ದರಾಮಯ್ಯ ದಲಿತರ ಬಗ್ಗೆ ದೊಡ್ಡ ಭಾಷಣ ಮಾಡ್ತಾರೆ. ಈಗ ಮಾತಾಡಲು ನಿಮಗೆ ಎಲ್ಲಿದೆ ನೈತಿಕತೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಪ್ರಕರಣ: ED ಎದುರು ವಿಚಾರಣೆಗೆ ಹಾಜರಾದ ಬಸನಗೌಡ ದದ್ದಲ್ - Valmiki Corporation Scam