ವಿಜಯಪುರ: 7 ಬಾರಿ ಗೆಲುವಿನ ಜಯಭೇರಿ ಬಾರಿಸಿದ ಸೋಲಿಲ್ಲದ ಸರದಾರನಾಗಿ ರಮೇಶ ಜಿಗಜಿಣಗಿ ಹೊರಹೊಮ್ಮಿದ್ದಾರೆ. ವಿಜಯಪುರದಲ್ಲಿ ಮತ್ತೊಮ್ಮೆ ಕಮಲ ಅರಳಿಸಿದ್ದಾರೆ.
- ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ- 77,229 ಮತಗಳ ಅಂತರದ ಗೆಲುವು
- ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ- ಸೋಲು
- ರಮೇಶ ಜಿಗಜಿಣಗಿ ಪಡೆದ ಮತಗಳು- 6,72781
- ರಾಜು ಆಲಗೂರು ಪಡೆದ ಮತಗಳು- 5,95552
ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರವಾದ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಜಯ ಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರ ವಿರುದ್ಧ ಬಿಜೆಪಿಯಿಂದ ರಮೇಶ್ ಜಿಗಜಿಣಗಿ ಗೆಲುವು ದಾಖಲಿಸಿದ್ದಾರೆ. ಅಂದುಕೊಂಡಂತೆ ಬಿಜೆಪಿ ಗೆಲುವಿನ ನಗೆ ಬೀರಿದೆ.
ವಿಜಯಪುರದಲ್ಲಿ ಮತ್ತಷ್ಟು ಬಿಜೆಪಿ ಭದ್ರ: 1999ರ ಚುನಾವಣೆಯಿಂದ ಈವರೆಗೆ ಈ ಕ್ಷೇತ್ರ ಬಿಜೆಪಿ ವಶದಲ್ಲಿದೆ. ರಮೇಶ ಜಿಗಜಿಣಗಿ ಚಿಕ್ಕೋಡಿಯಿಂದ 3 ಸಲ, ಈ ಕ್ಷೇತ್ರದಿಂದಲೂ 3 ಸಲ ಸತತ ಜಯ ಸಾಧಿಸಿ 'ಡಬಲ್ ಹ್ಯಾಟ್ರಿಕ್' ಸರದಾರ ಎನಿಸಿಕೊಂಡಿದ್ದಾರೆ. ಇದೀಗ ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ 7ನೇ ಜಯದ ಪತಾಕೆಯನ್ನು ಹಾರಿಸಿದ್ದಾರೆ. ಕೈ ಅಭ್ಯರ್ಥಿ ಪರವಾಗಿ ರಾಹುಲ್ ಗಾಂಧಿ ಪ್ರಚಾರ ಸಭೆ ನಡೆಸಿರುವುದು ಫಲ ನೀಡಲಿಲ್ಲ. ಬದಲಿಗೆ ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆ ಸಮಾವೇಶದ ಮೂಲಕ ಕ್ಯಾಂಪೇನ್ ಮಾಡಿದ್ದು ಫಲ ನೀಡಿದೆ.
ಕಳೆದ ಲೋಕಸಭೆ ಚುನಾವಣೆಗಳ ಫಲಿತಾಂಶ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆದ ಚುನಾವಣೆಯಲ್ಲಿ ಶೇ 64.71ರಷ್ಟು ಮತದಾನವಾಗಿತ್ತು. ಒಟ್ಟು 19,46,090 ಮತದಾರರಿದ್ದಾರೆ. 2019ರ ಚುನಾವಣೆಯಲ್ಲಿ 17,97,587 ಮತದಾರರನ್ನು ಹೊಂದಿದ್ದ ಕ್ಷೇತ್ರದಲ್ಲಿ 10,99,068 ಮತಗಳು ಮಾನ್ಯವಾಗಿದ್ದವು. ರಮೇಶ್ ಜಿಗಜಿಣಗಿ ಮೂರನೇ ಬಾರಿ ಗೆದ್ದು ಸಂಸತ್ ಪ್ರವೇಶಿಸಿದ್ದರು. ಇವರು ಒಟ್ಟು 6,35,867 ಮತಗಳನ್ನು ಪಡೆದರೆ, ಜನತಾ ದಳ (ಜಾತ್ಯತೀತ) ಮತ್ತು ಕಾಂಗ್ರೆಸ್‌ನ ಡಾ.ಸುನೀತಾ ದೇವಾನಂದ ಚವ್ಹಾಣ್ 3,77,829 ಮತ ಗಳಿಸಿದ್ದರು.
ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಪ್ರತಿಕ್ರಿಯೆ: ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ''ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ನನಗೆ ಮತ ನೀಡಿ, ಆಶೀರ್ವದಿಸಿದ ಎಲ್ಲ ಮತದಾರರಿಗೆ ಕೃತಜ್ಞತೆಗಳು. ಈ ಚುನಾವಣೆಯಲ್ಲಿ ನನಗೆ ಬೆಂಬಲವಾಗಿ ನಿಂತು, ಸಹಕಾರ ನೀಡಿ, ಹಗಲಿರುಳು ಶ್ರಮಿಸಿದ ಸಚಿವರು, ಶಾಸಕರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅತಿ ಹೆಚ್ಚು ಒಗ್ಗಟ್ಟಿನಿಂದ ಶ್ರಮಿಸಿದ್ದರು. ಅವರೆಲ್ಲರಿಗೂ ನನ್ನ ವೈಯಕ್ತಿಕ ಕೃತಜ್ಞತೆಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ. ಹಾಗೂ ಗೆಲುವು ಸಾಧಿಸಿದ ರಮೇಶ ಜಿಗಜಿಣಗಿ ಅವರಿಗೆ ಅಭಿನಂದಿಸುತ್ತೇನೆ. ರಮೇಶ ಜಿಗಜಿಣಗಿಯವರು ಮಾಡುವ ಎಲ್ಲ ಉತ್ತಮ ಕಾರ್ಯಗಳಿಗೆ ನಾನು ಸಹಕಾರ ನೀಡುತ್ತೇನೆ'' ಎಂದು ತಿಳಿಸಿದರು.
ಓದಿ: ಪರಿಷತ್ ಚುನಾವಣೆ: ಕಾಂಗ್ರೆಸ್‌ನ 7 ಅಭ್ಯರ್ಥಿಗಳ ಆಸ್ತಿ ವಿವರ ಹೀಗಿದೆ - Congress Candidates Asset Details