ಹೊಸಪೇಟೆ (ವಿಜಯನಗರ ): ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ವಿಜಯನಗರ ಜಿಲ್ಲೆಯ ಹಂಪಿ ಕ್ಷೇತ್ರಕ್ಕೆ ಬರುವ ಭಕ್ತರಲ್ಲಿ ಭಕ್ತಿ ಭಾವನೆ ಮೂಡಿಸುವ ಸದುದ್ದೇಶದಿಂದ ಜಿಲ್ಲಾಡಳಿತವು ಹೊಸ ಹಜ್ಜೆ ಇರಿಸಿದೆ. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಶಾಸಕ ಹೆಚ್.ಆರ್.ಗವಿಯಪ್ಪ ಅವರೊಂದಿಗೆ ಜನವರಿ 26 ರಂದು ಖುದ್ದಾಗಿ ಹಂಪಿ ಕ್ಷೇತ್ರಕ್ಕೆ ತೆರಳಿ ಶ್ರೀ ವಿರುಪಾಕ್ಷೇಶ್ವರನ ಸನ್ನಿಧಿಯಲ್ಲಿ ಭಕ್ತರು ಪ್ರವೇಶಿಸಲು ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿದರು.
ಜೀನ್ಸ್ ಪ್ಯಾಂಟ್ ಮತ್ತು ಬರ್ಮೊಡಾ ಧರಿಸಿ ಬಂದಿದ್ದ ಭಕ್ತರನ್ನು ಮಾತನಾಡಿಸಿದ ಜಿಲ್ಲಾಧಿಕಾರಿಗಳು, ಹಂಪಿಯು ಬರೀ ಪ್ರವಾಸಿ ತಾಣವಲ್ಲ. ಅದು ಶ್ರೀ ವಿರುಪಾಕ್ಷೇಶ್ವರ ದೇವರ ಪುಣ್ಯಕ್ಷೇತ್ರವೂ ಆಗಿದೆ ಎಂದು ಮನವರಿಕೆ ಮಾಡಿದರು. ತಕ್ಷಣ ಸಾಂಪ್ರದಾಯಿಕ ಶೈಲಿಯ ಶಲ್ಲೆ, ಪಂಚೆ ನೀಡಿ ದೇವರ ದರ್ಶನ ಪಡೆಯಲು ಭಕ್ತರಿಗೆ ತಿಳಿಸಿ ಜಾಗೃತಿ ಮೂಡಿಸಿದರು.
ಶಲ್ಲೆ, ಪಂಚೆ ನೀಡಿದ ಡಿಸಿ: ಜಿಲ್ಲಾಧಿಕಾರಿಗಳು ತಾವೇ ಖುದ್ದು ಭಕ್ತರಿಗೆ ಪ್ರವಾಸಿಗರಿಗೆ ಪಂಚೆ, ಶಲ್ಲೆ ವಿತರಿಸಿ ಶ್ರೀ ವಿರುಪಾಕ್ಷೇಶ್ವರ ದೇವಾಲಯ ಪ್ರವೇಶಿಸಿ ದರ್ಶನ ಪಡೆಯುವಂತೆ ಸೂಚಿಸಿದರು. ಈ ವೇಳೆ, ಅವರು ಶ್ರೀ ವಿರುಪಾಕ್ಷೇಶ್ವರ ದೇಗುಲ ಮಹತ್ವದ ಬಗ್ಗೆ ಜನರಿಗೆ ಮಾಹಿತಿ ನೀಡಿ ಭಕ್ತಿ ಭಾವನೆ ಮೂಡಿಸಿದರು.
ಬಹಳ ದಿನದ ಬೇಡಿಕೆ: ಹಂಪಿ ಪ್ರವಾಸಿ ತಾಣ, ಶ್ರೀ ವಿರುಪಾಕ್ಷೇಶ್ವರ ದೇವರ ಪ್ರಸಿದ್ಧ ಭಕ್ತಿಯ ಕೇಂದ್ರವೂ ಆಗಿದೆ. ಆದರೆ, ಕೆಲವು ಪ್ರವಾಸಿಗರು ಹಂಪಿಗೆ ಬಂದಿದ್ದ ವೇಳೆ ಬರ್ಮೊಡಾ, ಜೀನ್ಸ ಪ್ಯಾಂಟ್ ತುಂಡುಡುಗೆ ಧರಿಸಿ ಶ್ರೀ ವಿರುಪಾಕ್ಷೇಶ್ವರನ ದೇವಸ್ಥಾನ ಪ್ರವೇಶ ಮಾಡುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಅನೇಕ ಸಲ ಪ್ರಶ್ನಿಸಿದ್ದರು. ಬಹಳಷ್ಟು ದಿನಗಳ ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿದ ಜಿಲ್ಲಾಡಳಿತವು, ಅಗತ್ಯ ಕ್ರಮ ಕೈಗೊಂಡು ಹೊಸ ಪರಂಪರೆಗೆ ನಾಂದಿ ಹಾಡಿದೆ.
ಭಕ್ತಿ ಸೇವೆ ರಸೀದಿ ವಿತರಣೆಯೂ ಗಣಕೀಕರಣ: ದೇವಸ್ಥಾನದಲ್ಲಿ ಭಕ್ತಿಯ ಸೇವೆಗಳಿಗೆ ಭೌತಿಕವಾಗಿ ರಸೀದಿ ನೀಡಿ ಹಣ ಪಡೆಯುವ ವ್ಯವಸ್ಥೆ ಇತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಭಕ್ತಿಯ ಸೇವೆ ರಸೀದಿ ಗಣಕೀಕರಣಕ್ಕೂ ಸಹ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡರು. ಮೊದಲನೆಯದಾಗಿ ಶಾಸಕರಿಂದ ಹಣ ಪಡೆದು ಗಣಕೀಕರಣದ ರಸೀದಿ ಸೇವೆಗೆ ಚಾಲನೆ ಕೊಡಿಸಿದರು.
ಮೆಟಲ್ ಡಿಟೆಕ್ಟರ್ ಅಳವಡಿಸಲು ಕ್ರಮ: ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಪ್ರತಿ ದಿನ ಲಕ್ಷಕ್ಕೂ ಹೆಚ್ಚು ಭಕ್ತರು ಬರುತ್ತಿದ್ದು, ಇದರಿಂದ ದೇವಸ್ಥಾನದ ಆವರಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ದೇವಸ್ಥಾನದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲು ಸಹ ಜಿಲ್ಲಾಡಳಿತ ನಿರ್ಧರಿಸಿದೆ.
ಹಂಪಿ ಭಕ್ತಿಯ ಶ್ರದ್ಧಾ ಕೇಂದ್ರ: ಡಿಸಿ ದಿವಾಕರ: ಹಂಪಿ ಕ್ಷೇತ್ರವೂ ಪ್ರವಾಸಿ ತಾಣ, ಭಕ್ತಿಯ ಶ್ರದ್ಧಾ ಕೇಂದ್ರವೂ ಆಗಿದೆ. ಪ್ರವಾಸಕ್ಕೆ ಬರುವವರು ದೇವಸ್ಥಾನಕ್ಕೆ ಭೇಟಿ ನೀಡುವ ಸಮಯದಲ್ಲಿ ಭಕ್ತಿ ಭಾವನೆ ತರವು ಉಡುಪು ಧರಿಸಿ ದೇವರ ದರ್ಶನ ಪಡೆಯುವ ಸದುದ್ದೇಶದಿಂದ ಜನರಿಗೆ ವಿಶೇಷ ಸಂದೇಶ ಹೋಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ದೇವರ ದರ್ಶನದ ವೇಳೆ ದೇವಸ್ಥಾನದಲ್ಲಿ ಪಂಚೆ, ಶಲ್ಲೆ ಪಡೆಯಲು ಯಾವುದೇ ಶುಲ್ಕ ನಿಗದಿಪಡಿಸಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಮಹದ್ ಅಲಿ ಅಕ್ರಮ ಷಾಷಾ ,ಹಂಪಿ ಗ್ರಾಮಸ್ಥರು, ಪ್ರವಾಸಿಗರು ಹಾಜರಿದ್ದರು.