ಬೆಂಗಳೂರು: 10 ವರ್ಷಗಳ ಹಿಂದೆ ನಡೆಸಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದ್ದು, ಇದನ್ನು ಸರಿಪಡಿಸುವ ಅಗತ್ಯವಿದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎನ್ನುವುದೂ ಸೇರಿದಂತೆ ಐದು ಪ್ರಮುಖ ನಿರ್ಣಯಗಳನ್ನು ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭಾ ಕೈಗೊಂಡಿದೆ.
ನಗರದ ಖಾಸಗಿ ಹೋಟೆಲ್ನಲ್ಲಿಂದು ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭೆಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಹೆಚ್.ಕಾಂತರಾಜು ಅವರ ವರದಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವೀರಶೈವ-ಲಿಂಗಾಯತ ಸಮಾಜದ ಹಾಲಿ ಹಾಗೂ ಮಾಜಿ ಲೋಕಸಭಾ, ರಾಜ್ಯಸಭಾ, ವಿಧಾನಸಭಾ, ವಿಧಾನಪರಿಷತ್ ಸದಸ್ಯರು ಮತ್ತು ಸಮಾಜದ ಮುಖಂಡರು ಭಾಗಿಯಾಗಿದ್ದರು.
ಹಾಲಿ ವರದಿ ಬಿಡುಗಡೆಗೆ ವಿರೋಧಿಸುವ ನಿರ್ಧಾರದೊಂದಿಗೆ ಹೊಸದಾಗಿ ಸಮೀಕ್ಷೆ ನಡೆಸಬೇಕು ಎನ್ನುವ ಎಲ್ಲ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಯಿತು. ಈ ಸಂಬಂಧ ನಿರ್ಣಯವನ್ನೂ ಕೈಗೊಳ್ಳಲಾಯಿತು.
ನಿರ್ಣಯಗಳು:
- ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭೆಯು ಬಸವಾದಿ ತತ್ವಗಳನ್ನು ಪ್ರತಿಪಾದಿಸುತ್ತಿದ್ದು, ಸರ್ವರಿಗೂ ಒಳ್ಳೆಯದನ್ನು ಬಯಸುವ ಸಮಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಶರಣರ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಸಂಸ್ಥೆಯಾಗಿದೆ. ನಾವು ಜಾತಿಗಣತಿಯ ವಿರೋಧಿಗಳಲ್ಲ. ಆದರೆ ಕಳೆದ 10 ವರ್ಷಗಳ ಹಿಂದೆ ನಡೆಸಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯು ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದ್ದು, ಇದನ್ನು ಸರಿಪಡಿಸುವ ಅಗತ್ಯವಿದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕೆಂದು ಮಹಾಸಭೆ ಆಗ್ರಹಿಸುತ್ತದೆ.
- ರಾಜ್ಯ ಸರ್ಕಾರದ ಪರಿಗಣನೆಯಲ್ಲಿರುವ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸುಗಳು, ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆಸಿದ ಸಮೀಕ್ಷಾ ವರದಿಯಾಗಿದ್ದು, ಈ ವರದಿಯು ಅವೈಜ್ಞಾನಿಕ ಮತ್ತು ಅಸಾಂವಿಧಾನಿಕವಾದುದ್ದರಿಂದ ಸ್ವೀಕಾರಕ್ಕೆ ಅರ್ಹವಲ್ಲವೆಂದು ಮಹಾಸಭೆಯು ಸ್ಪಷ್ಟವಾಗಿ ಅಭಿಪ್ರಾಯಿಸುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಕುರಿತಾದ ಯಾವುದೇ ಉದ್ದೇಶಿತ ಪ್ರಕ್ರಿಯೆಯನ್ನು ಕೈಬಿಡಬೇಕು.
- ರಾಜ್ಯ ಹಿಂದುಳಿದ ವರ್ಗಗಳ (ಒ.ಬಿ.ಸಿ) ಪಟ್ಟಿಯಲ್ಲಿ ವಿವಿಧ ವರ್ಗಗಳ ಅಡಿಯಲ್ಲಿ ಹಲವಾರು ಲಿಂಗಾಯತ ಉಪಪಂಗಡಗಳ ಹೆಸರಿನ ಜೊತೆಯಲ್ಲಿ "ಲಿಂಗಾಯತ" ಪದವಿಲ್ಲದೇ ಕೇವಲ ಉಪಪಂಗಡಗಳ ಹೆಸರನ್ನು ಮಾತ್ರ ನಮೂದಿಸಲಾಗಿರುತ್ತದೆ. ಆದ್ದರಿಂದ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯ ಸಿವಿಲ್ ಅಪೀಲ್ ನಂ. 7241/2021 ಪ್ರಕರಣದಲ್ಲಿ ನೀಡಿರುವ ತೀರ್ಪು ಆಧಾರವಾಗಿರಿಸಿಕೊಂಡು, ಎಲ್ಲಾ ಲಿಂಗಾಯತ ಉಪಪಂಗಡಗಳ ಜೊತೆಯಲ್ಲಿ "ಲಿಂಗಾಯತ" ಎಂದು ನಮೂದಿಸಿದ ಆಯ್ಕೆಯನ್ನು ಈಗಿರುವ ಪಟ್ಟಿಯಲ್ಲಿ, ಉಪಪಂಗಡಗಳಿರುವ ವರ್ಗಗಳನ್ನು ಬದಲಾಯಿಸದೇ ಸರ್ಕಾರದ ಆದೇಶಕ್ಕೆ ಸೂಕ್ತ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಮಹಾಸಭಾ ಮನವಿ ಮಾಡುತ್ತದೆ.
- ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ (ಒ.ಬಿ.ಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಬೇಕು.
- ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕ ನ್ಯಾಯ ಕುರಿತಾದ ಸರ್ಕಾರದ ಎಲ್ಲಾ ಸೈದ್ಧಾಂತಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ನಿಂತು ಬೆಂಬಲಿಸುತ್ತದೆ ಎಂದು ನಮ್ಮ ಸಮುದಾಯದ ಪರವಾಗಿ ಮಹಾಸಭೆಯ ಅಧ್ಯಕ್ಷನಾಗಿ ನಾನು ತುಂಬು ಹೃದಯದಿಂದ ಆಶ್ವಾಸನೆಯನ್ನು ನೀಡುತ್ತೇನೆ ಎಂದು ಶಾಮನೂರು ಶಿವಶಂಕರಪ್ಪ ಪ್ರಕಟಿಸಿದರು.
ಇದನ್ನೂ ಓದಿ: ಜಾತ್ಯತೀತ ರಾಷ್ಟ್ರದಲ್ಲಿ ಜಾತಿಗಣತಿ ಯುಕ್ತ ಅಲ್ಲ: ಪೇಜಾವರ ಶ್ರೀ