ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರ ಹೆಸರು ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ಕೈ ಪಕ್ಷದಲ್ಲಿ ಭಿನ್ನಾಭಿಪ್ರಾಯ ಶಮನ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಸಂಯುಕ್ತಾ ಪಾಟೀಲ ಅಭ್ಯರ್ಥಿಯಾದ ನಂತರ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಧಾನವೂ ವಿಫಲವಾಗಿದೆ. ಹೀಗಾಗಿ ವೀಣಾ ಕಾಶಪ್ಪನವರ್ ಮುಂದೇನು ಮಾಡಬೇಕೆಂದು ತಿಳಿಯದೇ ತಟಸ್ಥರಾಗುಳಿಯುವ ನಿರ್ಧಾರ ಮಾಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ವೀಣಾ ಕಾಶಪ್ಪನವರ್ ಸೋಲು ಕಂಡರೂ ಧೃತಿಗೆಡದೆ ಮತ್ತೆ ಇಡೀ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಹೈಕಮಾಂಡ್ ಸಂಯುಕ್ತಾ ಪಾಟೀಲರಿಗೆ ಮಣೆ ಹಾಕಿತು. ಈ ಹಿನ್ನೆಲೆಯಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ನಡೆಯಿತು. ಈ ವೇಳೆ, ಟಿಕೆಟ್ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಹೆಚ್ಚಿನ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವಂತೆ ಶ್ರಮ ವಹಿಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವೀಣಾ ಕಾಶಪ್ಪನವರ್‌ಗಿಂತ ಹೆಚ್ಚು ಕ್ಷೇತ್ರದಲ್ಲಿ ಸಂಯುಕ್ತಾ ಪಾಟೀಲ ಕೆಲಸ ಮಾಡಿದ್ದಾರೆ ಎಂದು ಮುಖಂಡರು ಹೇಳಿರುವುದು ವೀಣಾ ಮನಸ್ಸಿಗೆ ನೋವಾಗಿದೆ. ಐದು ವರ್ಷದಿಂದ ಕೆಲಸ ಮಾಡಿದರೂ, ಈಗ ತಾನೇ ಬಂದಿರುವ ಸಂಯುಕ್ತಾ ಪರ ಎಲ್ಲರೂ ಬೆಂಬಲಿಸಿದ್ದಾರೆ. ನನಗೆ ಅನ್ಯಾಯವಾಗಿದೆ. ತಟಸ್ಥವಾಗುಳಿಯುತ್ತೇನೆ ಎಂದು ವೀಣಾ ಕಾಶಪ್ಪನವರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ ಟಿಕೆಟ್ ಬದಲಾವಣೆ ಅಸಾಧ್ಯವೆಂದ ಸಿಎಂ ಸಿದ್ದರಾಮಯ್ಯ; ವೀಣಾ ಕಾಶಪ್ಪನವರ್‌ಗೆ ನಿರಾಶೆ - Veena Kashappanavar