ಸುಬ್ರಹ್ಮಣ್ಯ/ದ.ಕ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಪ್ರಸಾದವು ಈ ಹಿಂದಿನಿಂದಲೂ ಪವಿತ್ರ ಮತ್ತು ಪರಮ ಪಾವನವಾದದ್ದು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನೂ ಭಕ್ತರಿಗೆ ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ.
ದೇಗುಲದಲ್ಲಿ ವಾರ್ಷಿಕವಾಗಿ ಸುಮಾರು 55 ಲಕ್ಷಕ್ಕೂ ಮಿಕ್ಕಿ ಭಕ್ತರು ಭೋಜನ ಪ್ರಸಾದವನ್ನು ಸ್ವೀಕರಿಸುತ್ತಾರೆ. ಪ್ರಸ್ತುತ ದೇಗುಲದ ಆಡಳಿತಾಧಿಕಾರಿಯಾಗಿರುವ ಪುತ್ತೂರು ಉಪಆಯುಕ್ತ ಜುಬಿನ್ ಮೊಹಪಾತ್ರ ಅವರ ವಿಶೇಷ ಕಾಳಜಿಯಿಂದ, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಗಳ ಯೋಜನೆಯಂತೆ ಭೋಜನ ಪ್ರಸಾದ ವ್ಯವಸ್ಥೆಯಲ್ಲಿ ವಿತರಿಸುವ ಖಾದ್ಯಗಳಲ್ಲಿ ಬದಲಾವಣೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ವಿಧವಿಧ ಪಾಯಸ ಸೇರಿದಂತೆ ವಿಶೇಷ ಭೋಜನ ಪ್ರಸಾದ ಪ್ರತಿದಿನ ದೊರಕುವಂತಾಗಿದೆ.
ಈ ಹಿಂದೆ ವಿಶೇಷ ದಿನಗಳನ್ನು ಹೊರತುಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು. ಆದರೆ, ಇದೀಗ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ. ಹೆಸರು ಬೇಳೆ, ಕಡ್ಲೆ ಬೇಳೆ, ಸಬ್ಬಕ್ಕಿ, ಗೋಧಿ ಕಡಿ, ಕಡ್ಲೆ ಬೇಳೆ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ರವೆ ಪಾಯಸ ಮತ್ತು ಸಿರಿಧಾನ್ಯಗಳ ಪಾಯಸಗಳು ಸೇರಿದಂತೆ ಸುಮಾರು 10 ಬಗೆಯ ಪಾಯಸಗಳ ವ್ಯವಸ್ಥೆ ಮಾಡಲಾಗಿದೆ.
ಸುಮಾರು 16 ಬಗೆಯ ತರಕಾರಿ ಬಳಕೆ: ಇಷ್ಟು ಮಾತ್ರವಲ್ಲದೇ, ಪ್ರಸಾದ ಭೋಜನವು ಅತ್ಯಂತ ರುಚಿ, ಸ್ವಾದಿಷ್ಟ ಮತ್ತು ಪೌಷ್ಟಿಕಾಂಶಗಳಿಂದ ಕೂಡಿರಬೇಕೆಂಬ ಉದ್ದೇಶದಿಂದ ಸುಮಾರು 16 ಬಗೆಯ ತರಕಾರಿಗಳನ್ನು ಪ್ರತಿದಿನ ಬದಲಾವಣೆಯೊಂದಿಗೆ ಸಾಂಬಾರಿಗೆ ಉಪಯೋಗಿಸಲು ಯೋಜನೆ ರೂಪಿಸಲಾಗಿದೆ.
"ದೇಗುಲಕ್ಕೆ ಬರುವ ಹಲವಾರು ಭಕ್ತರ ಜೊತೆಗೆ ಮಾತನಾಡಿದ್ದೇನೆ. ಎಲ್ಲರೂ ಇಲ್ಲಿನ ಅನ್ನಪ್ರಸಾದದ ಗುಣಮಟ್ಟ ಮತ್ತು ರುಚಿಯ ಬಗ್ಗೆ ಒಲವು ತೋರಿಸಿದ್ದಾರೆ. ಆದರೆ ಇದರ ಜೊತೆಗೆ ಪಾಯಸ ಮತ್ತು ವಿಧ ವಿಧದ ತರಕಾರಿಗಳನ್ನು ಸೇರಿಸುವ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಚಿಕ್ಕ ಮಕ್ಕಳೂ ಪಾಯಸ ಬೇಕೆಂಬ ಒಲವು ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಿನವೊಂದಕ್ಕೆ ವಿಧವಿಧವಾದ ಪಾಯಸಗಳು ಸೇರಿದಂತೆ 16 ಬಗೆಯ ತರಕಾರಿಗಳನ್ನು ಸೇರಿಸಿ, ಹಳೆಯ ರುಚಿ ಮತ್ತು ಗುಣಮಟ್ಟವನ್ನು ಅದೇ ರೀತಿ ಉಳಿಸಿಕೊಂಡು ಅನ್ನಪ್ರಸಾದದಲ್ಲಿ ಸ್ವಲ್ಪ ಬದಲಾವಣೆ ತರಲಾಗಿದೆ. ಇದು ಮಾತ್ರವಲ್ಲದೆ ದೇಗುಲದ ಒಳಾಂಗಣದಲ್ಲಿ ವೃದ್ದರು ನಡೆದಾಡುವಾಗ ಜಾರಿ ಬೀಳುವ ಪ್ರಸಂಗಗಳು ಎದುರಾಗಿತ್ತು. ಅಂತಹ ಕಡೆಗಳಲ್ಲಿ ಅವರಿಗೆ ಅನುಕೂಲಕರವಾಗಲಿ ಎಂಬ ನಿಟ್ಟಿನಲ್ಲಿ ಮ್ಯಾಟ್ ಅಳವಡಿಸಲಾಗಿದೆ. ವರ್ಷಗಳು ಹೋದಂತೆ ದೇಗುಲಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದನ್ನು ಮನಗಂಡು ಮುಂದಿನ ದಿನಗಳಲ್ಲಿ ದೇಗುಲಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಸೇರಿದಂತೆ ತುಂಬಾ ಕೆಲಸಗಳು ಆಗಬೇಕಿದೆ. ಇದನ್ನೆಲ್ಲಾ ಹಂತಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದೇಗುಲಕ್ಕೆ ಬರುವ ಭಕ್ತರು ಶ್ರೀ ದೇವರ ದರ್ಶನ ಪಡೆಯುವುದರೊಂದಿಗೆ ಇಲ್ಲಿಂದ ಸಂತೋಷವಾಗಿ ವಾಪಸ್ ಹೋಗಬೇಕೆನ್ನುವುದು ನಮ್ಮ ಆಶಯ" ಎಂದು ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ ಹೇಳಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಹೊಸ್ತಾರೋಗಣೆ ಸಂಭ್ರಮ - Thene Habba