ಬೆಳಗಾವಿ: ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸ್ಥಾಪಿಸಿರುವ ಮಳಿಗೆಯಲ್ಲಿ ಪೌರ ಕಾರ್ಮಿಕರ ಕೈಚಳಕದ 'ಕಸದಿಂದ ಕಲೆ' ಪ್ರದರ್ಶನಕ್ಕಿಡಲಾಗಿದೆ. ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಪೌರ ಕಾರ್ಮಿಕರು, ಸ್ವಚ್ಛತೆ ಮತ್ತು ಕಸದ ಕುರಿತು ಅರಿವು ಮೂಡಿಸಲು ತಯಾರಿಸಿರುವ ವಿವಿಧ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತಿವೆ. ಪೌರ ಕಾರ್ಮಿಕರ ಕಲೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬೇಷ್ ಎನ್ನುತ್ತಿದ್ದಾರೆ.
ಪ್ಲಾಸ್ಟಿಕ್ ಬಾಟಲಿಗಳಿಂದ ಕಸ ಗುಡಿಸುತ್ತಿರುವ ಪೌರ ಕಾರ್ಮಿಕ, ಮೀನು, ಮೂವಿಂಗ್ ಡಸ್ಟ್ ಬಿನ್ ಮಾದರಿಗಳನ್ನು ಇಲ್ಲಿ ನೋಡಬಹುದು. ಅದೇ ರೀತಿ ಹಸಿ ಕಸದಿಂದ ಗೊಬ್ಬರ ತಯಾರಿಕೆ, ಬಾಟಲ್ ಬೂಚ್ಗಳಿಂದ ನಿರ್ಮಿಸಿರುವ ನಿಸರ್ಗದ ಕಲಾಕೃತಿಗಳು, ಸೈಕಲ್, ಟೀ ಸ್ಟಾಲ್ ಮಾದರಿಗಳು ಆಕರ್ಷಿಸುತ್ತಿವೆ. ಪೌರ ಕಾರ್ಮಿಕರು ನಾಲ್ಕೈದು ಗುಂಪುಗಳನ್ನು ಮಾಡಿಕೊಂಡು ಈ ರೀತಿಯ ವಿಶೇಷ ಮಾದರಿಗಳನ್ನು ತಯಾರಿಸಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಪೌರ ಕಾರ್ಮಿಕ ಆನಂದ ಕೋಲಕಾರ, "ಕಸದಿಂದ ರಸ ಎನ್ನುವ ಮಾತಿನಂತೆ ನಿರುಪಯುಕ್ತ ಪ್ಲಾಸ್ಟಿಕ್ ಹಾಗೂ ಕಸವನ್ನು ಬಳಸಿಕೊಂಡು ಈ ರೀತಿ ಕಲಾಕೃತಿಗಳನ್ನು ತಯಾರಿಸಿದ್ದೇವೆ. ಎಲ್ಲಾ ಪೌರ ಕಾರ್ಮಿಕರು ಇದಕ್ಕಾಗಿ ಕೈ ಜೋಡಿಸಿದ್ದು, ನಮ್ಮಲ್ಲೂ ಕಲೆ, ಪ್ರತಿಭೆ ಇರುತ್ತದೆ ಎಂಬುದನ್ನು ಸಾಬೀತುಪಡಿಸಿದ್ದೇವೆ. ಜನರು ನಮ್ಮ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರು ಕೂಡ ಈ ರೀತಿ ತಮ್ಮ ಮನೆಯಲ್ಲಿ ಪ್ರಯೋಗ ಮಾಡುವ ಮೂಲಕ ಬೆಳಗಾವಿ ನಗರವನ್ನು ಅಂದವಾಗಿಡಲು ನಮಗೆ ಸಹಕರಿಸಿ" ಎಂದು ಕೋರಿದರು.
ಪಾಲಿಕೆ ಆರೋಗ್ಯ ನಿರೀಕ್ಷಕಿ ಶೋಭಾ ಕುಂಬಾರ ಮಾತನಾಡಿ, "ಮಹಾನಗರ ಪಾಲಿಕೆ ಆಯುಕ್ತರು, ಕಾರ್ಯಪಾಲಕ ಅಭಿಯಂತರರ ನಿರ್ದೇಶನದಲ್ಲಿ ನಮ್ಮ ಪೌರ ಕಾರ್ಮಿಕರು ತಮ್ಮ ಕಲೆಯನ್ನು ಪ್ರಸ್ತುತಪಡಿಸಿದ್ದಾರೆ. ಕಸವನ್ನು ಅಲ್ಲಿ, ಇಲ್ಲಿ ಚೆಲ್ಲಬಾರದು. ಹಸಿ ಕಸ, ಒಣ ಕಸ ಬೇರ್ಪಡಿಸಿ ಕೊಡಬೇಕು. ಹಸಿ ಕಸ ಬೇರ್ಪಡಿಸಿ ಕೊಟ್ಟರೆ ಗೊಬ್ಬರ ತಯಾರಿಸಬಹುದು. ಒಣ ಕಸದಿಂದ ಕಲಾಕೃತಿಗಳನ್ನು ರಚಿಸಬಹುದು ಎಂಬುದನ್ನೂ ಇಲ್ಲಿ ನಿರೂಪಿಸಲಾಗಿದೆ. ಅಧಿವೇಶನ ವೀಕ್ಷಿಸಲು ಬರುವವರಿಗೆ ಸ್ವಚ್ಛತೆ ಮತ್ತು ಕಸದ ಕುರಿತು ಮಾಹಿತಿ ನೀಡುತ್ತಿದ್ದು, ಮಕ್ಕಳು, ಜನರು ಕೂಡ ಈ ಕಲಾಕೃತಿಗಳನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ" ಎಂದರು.
ಬೈಲಹೊಂಗಲ ಇಂದಿರಾ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಚೇತನ್, ವಂದನಾ ಮಾತನಾಡಿ, "ಉಪಯೋಗಿಸಿ ಬಿಸಾಕಿದ ಬಾಟಲಿಗಳು, ಕಸದಿಂದ ಹೀಗೂ ಕಲಾಕೃತಿಗಳನ್ನು ತಯಾರಿಸಬಹುದು ಎಂಬುದನ್ನು ನಾವು ಊಹೆ ಕೂಡ ಮಾಡಿರಲಿಲ್ಲ. ಬಹಳ ಒಳ್ಳೆಯ ರೀತಿಯಲ್ಲಿ ತಯಾರಿಸಿದ್ದಾರೆ. ನಾವು ಮನೆಯಲ್ಲಿ ಈ ರೀತಿ ಪ್ರಯತ್ನಿಸುತ್ತೇವೆ" ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತೆ ಶುಭಾ ಬಿ. ಮಾತನಾಡಿ, "ಒಂದು ವಾರ ನಮ್ಮ ಪೌರ ಕಾರ್ಮಿಕರು ಶ್ರಮ ವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಸ್ವಚ್ಛ ಭಾರತ ಯೋಜನೆಯಡಿ 'ಕಸದಿಂದ ಕಲೆ' ಎನ್ನುವುದು ಇತ್ತಿಚಿನ ವಿಶಿಷ್ಟ ಪ್ರಕಾರವಾಗಿದೆ. ಈ ಕಾರ್ಯದಲ್ಲಿ ಸೇವೆ ಸಲ್ಲಿಸಿರುವ ನಮ್ಮ ಪಾಲಿಕೆಯ ಆರೋಗ್ಯ ನಿರೀಕ್ಷಕರು ಮತ್ತು ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ಅಧಿವೇಶನದ ಮೊದಲ ದಿನವೇ ವಕ್ಫ್, ಪಂಚಮಸಾಲಿ ಮೀಸಲಾತಿ ಸದ್ದು; ಸದನದಲ್ಲಿ ಮಾತಿನ ಚಕಮಕಿ, ಗದ್ದಲ